ರಾಯಚೂರು: ರಾಜ್ಯದಲ್ಲಿ ಒಂದು ಕಡೆ ಬರ ಮತ್ತೊಂದು ಕಡೆ ಭೀಕರ ಪ್ರವಾಹ ಉಂಟಾಗಿ ಜನರು ತತ್ತರಿಸುತಿದ್ದು, ಪ್ರಧಾನಿ ಮೋದಿ ಅವರಿಗೆ ಇಲ್ಲಿನ ಸಂತ್ರಸ್ತರ ಬಗ್ಗೆ ಎಳ್ಳಷ್ಟು ಕಾಳಜಿಯಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ದೂರಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ, ರಾಜ್ಯ ಪ್ರವಾಸ ಮಾಡದೇ ಸಂತ್ರಸ್ತರ ಸಮಸ್ಯೆ ಆಲಿಸಿಲ್ಲ ಹಾಗೂ ನಿನ್ನೆ ದೆಹಲಿಯ ಕೆಂಪುಕೋಟೆ ಮೇಲೆ ಧ್ವಜ ಹಾರಿಸಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದು, ದಕ್ಷಿಣ ಭಾರತದ ಪ್ರವಾಹದ ಕುರಿತು ಮಾತನಾಡಿಲ್ಲ, ಸೌಜನ್ಯಕ್ಕೂ ಸಾಂತ್ವನ ಹೇಳಿಲ್ಲ. ಭೀಕರ ಪ್ರವಾಹದಿಂದ ರಾಜ್ಯದ ಶೇ. 60 ರಷ್ಟು ಭಾಗ ಪ್ರವಾಹಕ್ಕೆ ತುತ್ತಾಗಿ ನಲುಗುತ್ತಿದೆ. ಈವರೆಗೆ ಒಂದು ನಯಾ ಪೈಸೆ ಕೂಡ ಪರಿಹಾರ ಘೋಷಿಸದೇ ನಿರ್ಲಕ್ಷ್ಯ ವಹಿಸಿದ್ದು ಖಂಡನೀಯ ಎಂದರು.
ಚುನಾವಣೆಗೂ ಮುನ್ನ ಪಿಎಂ ಮೋದಿ ಅವರು ಅನೇಕ ಬಾರಿ ರಾಜ್ಯ, ದಕ್ಷಿಣ ಭಾರತ ಪ್ರವಾಸ ಮಾಡಿದ್ದಾರೆ. ಆದ್ರೆ ಈಗ ಕನಿಷ್ಠ ಒಂದು ಭೇಟಿಯೂ ಮಾಡದೇ ಸಂತ್ರಸ್ತರ ಸಂಕಷ್ಟ ಆಲಿಸುವ ಕೆಲಸ ಮಾಡಿಲ್ಲ. ಇದರಿಂದ ಅವರ ದಕ್ಷಿಣ ಭಾರತದ ಬಗೆಗಿನ ಧೋರಣೆ ವ್ಯಕ್ತವಾಗುತ್ತೆ. ಕೂಡಲೇ ಇದನ್ನು ರಾಷ್ಟ್ರೀಯ ವಿಕೋಪ ಎಂದು ಘೋಷಿಸಿ ತುರ್ತು ಪರಿಹಾರ ಘೋಷಣೆ ಮಾಡಬೇಕು. ಪ್ರವಾಹ ಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸಿ ರಾಜ್ಯ ಪುನರ್ ನಿರ್ಮಾಣ ಕಾರ್ಯ ಮಾಡಬೇಕೆಂದು ಒತ್ತಾಯಿಸಿದರು.
ರಾಜ್ಯ ಸರಕಾರ ಈ ಬಾರಿ ಮೈಸೂರು ದಸರಾ ಹಬ್ಬ ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಿದ್ದು, ಗಮನಕ್ಕೆ ಬಂದಿದೆ. ಕೂಡಲೇ ಸಿ.ಎಂ ಯಡಿಯೂರಪ್ಪನವರು ಈ ನಿರ್ಧಾರ ಹಿಂಪಡೆದು ಸರಳ ಆಚರಣೆಗೆ ಮುಂದಾಗಬೇಕು. ಸೂತಕದ ನಡುವೆ ಸಂಭ್ರಮ ಸರಿಯಲ್ಲ, ಇದು ಸಂತ್ರಸ್ತರಿಗೆ ಅಪಮಾನ ಮಾಡಿದಂತಾಗುತ್ತದೆ ಎಂದರು.