ರಾಯಚೂರು: ಏರ್ಟೆಲ್ ಬಳಕೆದಾರರ ಪೂರ್ವಾನುಮತಿ ಇಲ್ಲದೆ, ಏರ್ಟೆಲ್ ಪೇಮೆಂಟ್ ಬ್ಯಾಂಕ್ ಖಾತೆ ತೆಗೆಯುವ ಮೂಲಕ ತನ್ನ ಬಳಕೆದಾರರಿಗೆ ಮೋಸ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಕಂಪನಿ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿ ಬಂದಿದೆ.
ಲಿಂಗಸುಗೂರು ಪಟ್ಟಣದ ನಿವಾಸಿ ಪ್ರಭು ಅತ್ನೂರು ಎಂಬುವವರು, ತೊಗರಿ ಮಾರಾಟ ಮಾಡಿ ಬಂದ ಹಣವನ್ನ ಪಟ್ಟಣದ ಎಸ್ಬಿಐ ಬ್ರ್ಯಾಂಚ್ ನಲ್ಲಿರುವ ಖಾತೆಗೆ ಜಮಾ ಮಾಡಲು ದಾಖಲಾತಿಗಳನ್ನ ಕೊಟ್ಟಿದ್ದರು. ಆದರೆ ಈ ಹಣ ಏರ್ಟೇಲ್ ಪೇಮೆಂಟ್ ಬ್ಯಾಂಕ್ಗೆ ಜಮಾ ಆಗಿದೆಯಂತೆ. ಇದು ಗ್ರಾಹಕರಲ್ಲಿ ಅಚ್ಚರಿ ತಂದಿದ್ದು, ಎಸ್ಬಿಐ ಖಾತೆಯ ವಿವರ ನೀಡಿದರೆ, ಏರ್ಟೆಲ್ ಪೇಮೆಂಟ್ ಬ್ಯಾಂಕ್ ಗೆ ಜಮಾ ಆಗಿರುವುದು ಗಾಬರಿಗೂ ಕಾರಣವಾಗಿದೆ. ಈ ಸಂಬಂಧ ಏರ್ಟೆಲ್ ಕಂಪನಿ ವಿರುದ್ಧ ಪ್ರಭು ಅತ್ನೂರು ಎಂಬ ರೈತ ದೂರು ನೀಡಿದ್ದಾರೆ.
ಕೆಲ ವರ್ಷಗಳ ಹಿಂದೆ ಏರ್ಟೆಲ್ ಕಂಪನಿ, ತನ್ನ ಸಿಮ್ ಕಾರ್ಡ್ ಹೊಂದಿದವರು ಆಧಾರ್ ಲಿಂಕ್ ಜೋಡಣೆ ಮಾಡಬೇಕು ಎಂದು ಹೇಳಿತ್ತು. ಈ ಸಮಯದಲ್ಲಿ ಅಸಂಖ್ಯಾತ ಗ್ರಾಹಕರು ಆಧಾರ್ ಕಾರ್ಡ್ ಜೋಡಣೆ ಮಾಡಿದ್ದರು ಎನ್ನಲಾಗಿದೆ. ಇನ್ನು ಸಿಮ್ಕಾರ್ಡ್ಗೆ ಆಧಾರ್‌ಕಾರ್ಡ್ ಲಿಂಕ್ ನೆಪದಲ್ಲಿ ಏರ್ಟೆಲ್ ಕಂಪನಿ ಬಳಕೆದಾರರಿಗೆ ಮಾಹಿತಿ ನೀಡದೇ ಪೇಮೆಂಟ್ ಬ್ಯಾಂಕ್ ಖಾತೆ ಆರಂಭಿಸಿದೆ ಎಂಬ ಆರೋಪ ಕೇಳಿ ಬಂದಿದೆ.
ಇನ್ನು ಯಾವುದೇ ಬ್ಯಾಂಕ್ ಖಾತೆ ತೆರೆಯಬೇಕಾದ್ರೆ ಆ ಗ್ರಾಹಕನ ಅನುಮತಿ ಕಡ್ಡಾಯವಾಗಿರುತ್ತದೆ. ಗ್ರಾಹಕನ ಸಮ್ಮತಿಯಿಲ್ಲದೇ ಖಾತೆ ತೆರೆದರೂ ಅದು ಕಾನೂನು ಬಾಹಿರ ಅಪರಾಧವಾಗುತ್ತದೆ. ಒಟ್ಟಿನಲ್ಲಿ ಆಧಾರ್‌ಕಾರ್ಡ್ ಹೊಂದಿದವರು, ಯಾವ ಉದ್ದೇಶಕ್ಕಾಗಿ ಆಧಾರ್‌ಕಾರ್ಡ್ ಬಳಕೆ ಮಾಡಿಕೊಳ್ಳಲಾಗುತ್ತದೆ ಎನ್ನುವ ಖಾತರಿ ಪಡಿಸಿಕೊಂಡು ಆಧಾರ್ ಜೋಡಣೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಇಂತಹ ಯಡವಟ್ಟುಗಳು ಆಗುತ್ತದೆ.