ರಾಯಚೂರು: ಹಲವು ದಶಕಗಳ ಹೋರಾಟದ ಫಲವಾಗಿ ರಾಯಚೂರು ಜಿಲ್ಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಸರ್ಕಾರ ಸಮ್ಮತಿಸಿದ್ದು, 50 ಕೋಟಿ ರೂಪಾಯಿ ಮೀಸಲು ಇರಿಸಿದೆ. ಆದರೆ ಉದ್ದೇಶಿತ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಮೀಸಲಿರಿಸಿದ್ದ ಜಾಗಕ್ಕೆ ಇದೀಗ ಭೂ ಒತ್ತುವರಿ ಸಮಸ್ಯೆ ಎದುರಾಗಿದೆ.
ರಾಯಚೂರು ಹೊರವಲಯ ಯರಮರಸ್ ಬಳಿ ವಿಮಾನ ನಿಲ್ದಾಣ ನಿರ್ಮಾಣಕ್ಕೆಂದು ಹಲವು ದಶಕಗಳಿಂದ ನೂರಾರು ಎಕರೆ ಜಮೀನು ಮೀಸಲು ಇರಿಸಲಾಗಿದೆ. ಈ ಭೂಮಿಗೆ ಈಗ ಚಿನ್ನದ ಬೆಲೆಯಿದ್ದು, ಒತ್ತುವರಿಯಾಗುತ್ತಿದೆ. ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ರೈತರಿಂದ ಸುಮಾರು 398 ಎಕರೆ ಪ್ರದೇಶವನ್ನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಮುಖ್ಯವಾಗಿ ಏಗನೂರು ಗ್ರಾಮ ವ್ಯಾಪ್ತಿಗೆ ಬರುವ 366 ಎಕರೆ ಜಮೀನು, ಯರಮರಸ್ನ ವ್ಯಾಪ್ತಿಗೆ ಬರುವ 32 ಎಕರೆ ಭೂಮಿಯಿದೆ.
ಜೊತೆಗೆ ಕಂಟೋನ್ಮೆಂಟ್ ಭೂಮಿ ಕೂಡ ಒತ್ತುವರಿಯಾಗಿದೆ ಎಂದು ಹೇಳಲಾಗುತ್ತಿದೆ. ಯರಮರಸ್ ದಂಡ್ ಇದರ ವ್ಯಾಪ್ತಿಗೆ ಒಳಪಡಲಿದ್ದು, ಅಲ್ಲಿನ ಕೆಲವರು ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಇದನ್ನೂ ಓದಿ: ಬೆಂಗಳೂರಲ್ಲಿ ಎಣ್ಣೆ ಕಿಕ್ನಿಂದ ಕಿರಿಕ್: ನಶೆಯಲ್ಲಿ ವಾಹನ ಜಖಂಗೊಳಿಸಿದವನಿಗೆ ಗೂಸಾ
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಜಿಲ್ಲೆಗೆ ಬಿಡುಗಡೆಯಾದ 50 ಕೋಟಿ ರೂಪಾಯಿಯನ್ನು ನಿಲ್ದಾಣಕ್ಕೆ ಕಾಯ್ದಿರಿಸಿ, ರೈಟ್ಸ್ ಕಂಪನಿಗೆ ಕಾಮಗಾರಿಯನ್ನು ಗುತ್ತಿಗೆ ನೀಡಲಾಗಿದೆ. ಇದೀಗ ನಿಲ್ದಾಣ ನಿರ್ಮಾಣಕ್ಕೆ ಮೀಸಲು ಇರಿಸಿದ ಜಾಗ ಸರ್ವೇ ಮಾಡುವಾಗ ಒತ್ತುವರಿಯಾಗಿರುವುದು ಕಂಡು ಬಂದಿದೆ. ಹೀಗಾಗಿ ಜಿಲ್ಲಾಡಳಿತ ಸರ್ವೇ ಕಾಮಗಾರಿಯನ್ನ ನಡೆಸಿ ಅಂದಾಜು 400 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಮಾಡಬೇಕು ಎನ್ನುವ ಉದ್ದೇಶವಿದೆ.
ಇದೀಗ ಭೂ ಒತ್ತುವರಿ ಸಮಸ್ಯೆ ತಲೆ ದೂರಿದ್ರೂ ಇದಕ್ಕೆ ಶೀಘ್ರದಲ್ಲಿ ಕ್ರಮ ಕೈಗೊಂಡು ಭೂಮಿಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಕಾಮಗಾರಿ ನಡೆಸುವುದಕ್ಕೆ ನೀಡಲಾಗುವುದು ಅಂತಾರೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್.