ರಾಯಚೂರು: ತೆಲಂಗಾಣಕ್ಕೆ ರಾಯಚೂರು ಜಿಲ್ಲೆಯನ್ನು ಸೇರಿಸಬೇಕೆಂದು ಜನ ಒತ್ತಾಯಿಸುತ್ತಿದ್ದಾರೆ ಎಂಬ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಹೇಳಿಕೆಯು ಹಾಸ್ಯಾಸ್ಪದ ಮತ್ತು ಇದೊಂದು ರಾಜಕೀಯ ಪ್ರೇರಿತ ಹೇಳಿಕೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಇಂದು ಆಯೋಜಿಸಿರುವ ಸಿರಿಧಾನ್ಯ ಮೇಳಕ್ಕೆ ಆಗಮಿಸಿರುವ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ರಾಯಚೂರು ಸಾಕಷ್ಟು ಅಭಿವೃದ್ಧಿಯಾಗುತ್ತಿದೆ. ಕೆಕೆಆರ್ಡಿಬಿಗೂ ಸಾಕಷ್ಟು ಅನುದಾನ ನೀಡುತ್ತಿದ್ದೇವೆ. ಪ್ರತ್ಯೇಕವಾದ ರಚನೆಯಾದ ನಂತರವೂ ತೆಲಂಗಾಣ ಇನ್ನೂ ಹಿಂದುಳಿದ ಪ್ರದೇಶವಾಗಿದೆ. ತೆಲಂಗಾಣದ ಸಮಸ್ಯೆಗಳ ಬಗೆಗಿನ ಗಮನ ಬೇರೆಡೆ ಸೆಳೆಯಲು ಕೆ ಚಂದ್ರಶೇಖರ್ ರಾವ್ ಈ ರೀತಿಯ ಹೇಳಿಕೆ ನೀಡಿದ್ದಾರೆ. ನಮ್ಮ ಒಂದಿಂಚು ಜಾಗವನ್ನು ನಾವು ಬಿಟ್ಟುಕೊಡುವ ಪ್ರಶ್ನೆಯೇ ಬರುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ರಾಯಚೂರು ಬಗ್ಗೆ ತೆಲಂಗಾಣ ಸಿಎಂ ಹೇಳಿಕೆ: ಬಿಜೆಪಿ ಸರ್ಕಾರದ ಮೌನ ಪ್ರಶ್ನಿಸಿದ ಕಾಂಗ್ರೆಸ್
ಆರೋಗ್ಯ ಸಚಿವರೊಂದಿಗೆ ಚರ್ಚೆ: ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಕಳೆದ ಬಾರಿ ದೆಹಲಿಗೆ ಹೋದಾಗ ಕೇಂದ್ರ ಆರೋಗ್ಯ ಸಚಿವರೊಂದಿಗೆ ಏಮ್ಸ್ ಸ್ಥಾಪನೆ ಬಗ್ಗೆ ಮಾತನಾಡಿದ್ದೇನೆ. 371 (ಜೆ) ಜಾರಿ ಇರುವ ಭಾಗ, ಕೇಂದ್ರದ ಮಹತ್ವಾಕಾಂಕ್ಷೆ ಜಿಲ್ಲೆ ಹಾಗೂ ಅಪೌಷ್ಟಿಕತೆ ಹೆಚ್ಚಿರುವ ಜಿಲ್ಲೆಯಾಗಿದ್ದು, ಉತ್ತಮ ಆರೋಗ್ಯ ಸಂಸ್ಥೆ ಬೇಕೆಂದು ಕೇಳಿದ್ದೇನೆ. ಅತೀ ಶೀಘ್ರದಲ್ಲಿ ಒಂದು ನಿರ್ಣಯ ಮಾಡುತ್ತೇವೆ ಎಂದು ತಿಳಿಸಿದರು.
ವಿಮಾನ ನಿಲ್ದಾಣಕ್ಕೆ ಅಡಿಗಲ್ಲು: ಇದೇ ವೇಳೆ ಮುಂದಿನ ತಿಂಗಳ ವಿಮಾನ ನಿಲ್ದಾಣಕ್ಕೆ ಅಡಿಗಲ್ಲು ಹಾಕಲಾಗುತ್ತದೆ. ಇದೇ ರೀತಿಯ ಅಭಿವೃದ್ಧಿ ಕಾರ್ಯಗಳಿಗೆ ಮುಂದಿನ ದಿನಗಳಲ್ಲಿ ಚಾಲನೆಯನ್ನು ಕೊಡಲಾಗುತ್ತದೆ. ಸಿರಿಧಾನ್ಯ ಬೆಳೆಯಲು ಸರ್ಕಾರ ಎಲ್ಲ ರೀತಿಯ ಉತ್ತೇಜನ ನೀಡಲಿದೆ. ಆರ್ಥಿಕ ಸಹಾಯ ನೀಡುವುದು ಸೇರಿದಂತೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಹೇಳಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯಡಿ ರಾಜ್ಯದ ಪಾಲಿನ ನೀರಿನ ಸಂಪೂರ್ಣ ಬಳಕೆಗೆ ಸರ್ಕಾರ ಬದ್ಧವಾಗಿದೆ. ಆಲಮಟ್ಟಿ ಜಲಾಶಯದಲ್ಲಿ ನೀರಿನ ಮಟ್ಟದಲ್ಲಿ ಹೆಚ್ಚಳಕ್ಕೆ ಅಗತ್ಯವಿರುವ ಕ್ರಮ ಕೈಗೊಳ್ಳಲಾಗಿದೆ. ನೀರಾವರಿ ಯೋಜನೆ ಜಾರಿಗೆ ಅಗತ್ಯವಿರುವ ಬಾಧಿತವಾಗುವ ಗ್ರಾಮಗಳ ಸ್ಥಳಾಂತರಕ್ಕೆ ಸೂಚನೆ ನೀಡಲಾಗಿದೆ ಎಂದು ಸಿಎಂ ಮಾಹಿತಿ ನೀಡಿದರು.
ಗುಳೆ ತಪ್ಪಿಸಲು ಅಂಶಗಳು: ಇಲ್ಲಿನ ಜನರು ಸಿಟಿಗಳಿಗೆ ಗುಳೆ ಹೋಗುವ ವಿಚಾರದ ಬಗ್ಗೆ ಮಾತನಾಡಿ, ಜನರು ಗುಳೆ ಹೋಗುವುದು ತಪ್ಪಿಸಲು ಎರಡು- ಮೂರು ಅಂಶಗಳು ಮುಖ್ಯವಾಗಿವೆ. ನೀರಾವರಿ ಮತ್ತು ಉದ್ಯೋಗಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ರಾಯಚೂರಿನಲ್ಲಿ ಈಗಾಗಲೇ ಇಂಡಸ್ಟ್ರೀಸ್ ಸೆಂಟರ್ ಇದೆ. ಅದನ್ನು ಮತ್ತಷ್ಟು ವಿಸ್ತರಣೆ ಮಾಡಬೇಕಾಗಿದೆ. ಗಾರ್ಮೆಂಟ್ ಉದ್ಯೋಗಕ್ಕೆ ಬಳ್ಳಾರಿ, ರಾಯಚೂರು, ಕಲಬುರಗಿಗೆ ಹೆಚ್ಚು ಒತ್ತು ನೀಡುತ್ತೇವೆ. ಜವಳಿ ಪಾರ್ಕ್ ರಾಜ್ಯದಲ್ಲಿ ಸ್ಥಾಪನೆಯಾಗಲಿದೆ. ಅದು ರಾಯಚೂರಿಗೆ ನೀಡಲು ಶಿಫಾರಸ್ಸು ಮಾಡಲಾಗುವುದು ಎಂದರು.
ರುಪ್ಸಾ ಆರೋಪದಲ್ಲಿ ಹುರುಳಿಲ್ಲ: ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ರುಪ್ಸಾ ಆರೋಪದ ಕುರಿತ ಪ್ರಕ್ರಿಯಿಸಿದ ಸಿಎಂ, ಈಗಾಗಲೇ ಶಿಕ್ಷಣ ಸಚಿವರು ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದ್ದಾರೆ. ಮತ್ತೆ ನಾನು ಅದಕ್ಕೆ ಸ್ಪಷ್ಟೀಕರಣ ಕೊಡುವ ಅಗತ್ಯವಿಲ್ಲ. ಕಮಿಷನ್ ಆರೋಪದ ಬಗ್ಗೆ ಯಾವುದಾದರೂ ಕಾಮಗಾರಿಯಲ್ಲಿ ನಡೆದಿದೆ ಎನ್ನುವುದಾದರೆ ದಾಖಲೆ ಕೊಡಲಿ, ತನಿಖೆ ಮಾಡಿಸುತ್ತೇವೆ ಎಂದು ಹೇಳಿದರು.
ಬೆಂಗಳೂರಿನ ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರ ಬಗ್ಗೆ ಸದ್ಯ ಉನ್ನತ ಮಟ್ಟದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಸಭೆ ನಡೆಯುತ್ತಿದೆ. ನಾನು ಬೆಂಗಳೂರಿಗೆ ಹೋದ ಮೇಲೆ ಮುಂದಿನದನ್ನು ಹೇಳುತ್ತೇನೆ ಎಂದರು.
ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಗಣೇಶೋತ್ಸವದ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ: ಸಚಿವ ಆರ್ ಅಶೋಕ್