ರಾಯಚೂರು : ರಾಯಚೂರಿನ ಒಪೆಕ್ ನೆರವಿನ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಾಮಗ್ರಿಗಳನ್ನ ನ್ಯಾಯಾಲಯದ ಸಿಬ್ಬಂದಿ ಜಪ್ತಿ ಮಾಡಿಕೊಂಡಿದ್ದಾರೆ.
ನಗರದ ಹೊರವಲಯದಲ್ಲಿರುವ ಒಪೆಕ್ ಆಸ್ಪತ್ರೆ, ಹೈದರಾಬಾದ್ನ ಅಪೋಲೋ ಸಂಸ್ಥೆ ನಿರ್ವಹಣೆಯಲ್ಲಿದ್ದ ವೇಳೆ 2004-05ನೇ ಸಾಲಿನಲ್ಲಿ ಚೆನ್ನೈ ಮೂಲದ ಲೇಜರ್ ಸಂಸ್ಥೆ ಇಂದ ಬಟ್ಟೆಗಳನ್ನು ಶುಚಿಗೊಳಿಸುವುದಕ್ಕೆ ಲಾಂಡ್ರಿ ಯಂತ್ರೋಪಕರಣವನ್ನು ಖರೀದಿ ಮಾಡಿತ್ತು. ಆಸ್ಪತ್ರೆ ನಿರ್ವಹಣೆಯನ್ನು ಅಪೋಲೋ ಸಂಸ್ಥೆ ಕೈಬಿಟ್ಟ ನಂತರದಲ್ಲಿ ಚೆನ್ನೈ ಮೂಲದ ಲೇಜರ್ ಸಂಸ್ಥೆಗೆ ಹಣ ಪಾವತಿ ಮಾಡಿರಲಿಲ್ಲ. ಹಾಗಾಗಿ ಲೇಜರ್ ಸಂಸ್ಥೆ ಸ್ಥಳೀಯ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು.
ಕರ್ನಾಟಕ ಸರಕಾರದ ಅಧೀನ ಸಂಸ್ಥೆ ಎನ್ನುವ ಕಾರಣಕ್ಕೆ ಯಂತ್ರೋಪಕರಣವನ್ನು ಸರಬರಾಜು ಮಾಡಲಾಗಿದ್ದು, ಸರಕಾರವೇ ಹಣ ಪಾವತಿಸಬೇಕು ಎನ್ನುವ ವಾದವನ್ನು ಸಂಸ್ಥೆ ಪರ ವಕೀಲರು ವಾದ ಮಂಡಿಸಿದ್ದರು. ಈ ಹಿಂದೆ ಲಕ್ಷಾಂತರ ರೂಪಾಯಿ ಮೌಲ್ಯದ ಯಂತ್ರೋಪಕರಣಕ್ಕೆ ಹಣ ಪಾವತಿಸದ ಕಾರಣ, ಸರಬರಾಜು ಮಾಡಿದ ಸಂಸ್ಥೆ ಹಣ ಪಾವತಿಸುವಂತೆ ಮನವಿ ಮಾಡಿದ್ದು, ಅಪೋಲೋ ಸಂಸ್ಥೆ ಖರೀದಿಸಿರುವ ಕಾರಣ ರಾಜ್ಯ ಸರಕಾರ ಹಣ ಪಾವತಿ ಮಾಡಿರಲಿಲ್ಲ.
ಒಪೆಕ್ ಸಂಸ್ಥೆ ಅಧಿಕಾರಿಗಳು ಈ ಕುರಿತು ಹೈಕೋರ್ಟ್ನಲ್ಲಿ ಮನವಿ ಸಲ್ಲಿಸಬಹುದಾಗಿತ್ತು. ಆದ್ರೆ, ಅಧಿಕಾರಿಗಳ ಬೇಜವಾಬ್ದಾರಿಯ ಫಲವಾಗಿ ಸರಿಯಾದ ಕ್ರಮಗಳು ಜರುಗದ ಕಾರಣ ನ್ಯಾಯಾಲಯದ ನಿರ್ದೇಶನದ ಮೇರೆಗೆ ಅಧಿಕಾರಿಗಳು ಆಸ್ಪತ್ರೆಗೆ ಆಗಮಿಸಿ ಕುರ್ಚಿ, ಕಂಪ್ಯೂಟರ್, ಪ್ರಿಂಟರ್ ಹಾಗೂ ಇನ್ನಿತರ ಸಾಮಗ್ರಿಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.