ರಾಯಚೂರು: ಗ್ರಾಮ ಒನ್ ಕೇಂದ್ರಗಳಲ್ಲಿ ಪಾಸ್‌ವಾರ್ಡ್ (ರಹಸ್ಯ ಸಂಖ್ಯೆ) ದುರ್ಬಳಕೆ ಮಾಡಿಕೊಂಡು ಗೃಹಲಕ್ಷ್ಮಿ ಯೋಜನೆಯ ನೋಂದಣಿ ಮಾಡಿಕೊಡಲು ಮಹಿಳೆಯರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದ ಆರೋಪದಡಿ ಮೂರು ಕಂಪ್ಯೂಟರ್ ಸೆಂಟರ್ ಮೇಲೆ ದಾಳಿ ಮಾಡಿದ ಅಧಿಕಾರಿಗಳು, ಅವುಗಳನ್ನು ಸೀಜ್ ಮಾಡಿರುವ ಘಟನೆ ಜಿಲ್ಲೆಯ ಮಾನವಿಯಲ್ಲಿ ನಡೆದಿದೆ.
ಪ್ರತಿ ತಿಂಗಳು 2000 ಸಾವಿರ ರೂಪಾಯಿ ಹಣವನ್ನು ಕುಟುಂಬದ ಮನೆ ಯಜಮಾನಿಯ ಖಾತೆಗೆ ಜಮಾ ಮಾಡುವ ಉದ್ದೇಶದಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಗೃಹಲಕ್ಷ್ಮಿ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಈ ಯೋಜನೆಯ ಹಣ ಪಡೆಯಲು ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವ ಮಹಿಳೆಯರು ಗ್ರಾಮದ ಸಮೀಪವಿರುವ ಗ್ರಾಮ-ಒನ್ ಕೇಂದ್ರ ಅಥವಾ ಬಾಪೂಜಿ ಸೇವಾ ಕೇಂದ್ರದಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಸರ್ಕಾರ ಇತ್ತೀಚೆಗಷ್ಟೇ ಹೇಳಿತ್ತು. ಆದರೆ, ಇದರ ಹೆಸರಿನಲ್ಲಿ ಮಾನವಿಯ ಗ್ರಾಮ ಒನ್ ಕೇಂದ್ರದ ಪಾಸ್‌ವರ್ಡ್ ಅನ್ನು ಖಾಸಗಿ ಅಂಗಡಿಯಲ್ಲಿ ದುರ್ಬಳಕೆ ಮಾಡಿಕೊ೦ಡು ಒಂದು ಅರ್ಜಿಗೆ 200 ರೂ. ವಸೂಲಿ ಮಾಡುತ್ತಿದ್ದರು ಎಂಬ ದೂರು ಕೇಳಿ ಬಂದಿತ್ತು. ಈ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಮಾನವಿಯ ತಹಶೀಲ್ದಾರ್ ಎಲ್ ಡಿ ಚಂದ್ರಕಾಂತ ಅವರು ತಮ್ಮ ಸಿಬ್ಬಂದಿಯೊಂದಿಗೆ ಎಕ್ಸೆಲ್ ಕಂಪ್ಯೂಟರ್, ಲಕ್ಷ್ಮೀ ಕಂಪ್ಯೂಟರ್, ಸೂರ್ಯ ಕಂಪ್ಯೂಟರ್ ಸೆಂಟರ್ ಮೇಲೆ ದಾಳಿ ನಡೆಸಿ ಸೀಜ್ ಮಾಡಿದ್ದಾರೆ.
ದಾಳಿ ಬಳಿಕ ಮಾಹಿತಿ ನೀಡಿದ ತಹಶೀಲ್ದಾರ್ ಚಂದ್ರಕಾಂತ್, ಸರ್ಕಾರದ ಗ್ರಾಮ್ ಒನ್, ಬಾಪೂಜಿ ಸೇವಾ ಕೇಂದ್ರದಲ್ಲಿ ಮಹಿಳೆಯರಿಗೆ ಉಚಿತ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ಕಲ್ಪಿಸಿದೆ. ಆದರೆ, ಸದಾಪೂರು ಗ್ರಾಮದಲ್ಲಿ ಗ್ರಾಮ ಒನ್ ಕೇಂದ್ರ ಇದ್ದರೂ ಸಹ ಅದನ್ನು ಬಂದ್ ಮಾಡಿ ಮಾನವಿ ಲಕ್ಷ್ಮಿ ಕಂಪ್ಯೂಟರ್ ಕೇಂದ್ರದಲ್ಲಿ ಸರ್ಕಾರ ನೀಡಿದ ಪಾಸ್‌ವರ್ಡ್ ಅನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಅಲ್ಲದೇ ಫಲಾನುಭವಿ ಮಹಿಳೆಯಿಂದ ನೋಂದಣಿ ಮಾಡಿಕೊಡಲು ಹೆಚ್ಚುವರಿ ಹಣ ಪಡೆಯುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಎಕ್ಸೆಲ್ ಕಂಪ್ಯೂಟರ್, ಲಕ್ಷ್ಮೀ ಕಂಪ್ಯೂಟರ್, ಸೂರ್ಯ ಕಂಪ್ಯೂಟರ್ ಸೆಂಟರ್ನಲ್ಲಿ ಒಂದು ಅರ್ಜಿಗೆ 200 ರಿಂದ 250 ರೂಪಾಯಿವರೆಗೆ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಮೂರು ಕಂಪ್ಯೂಟರ್ ಸೆಂಟರ್ ಅಂಗಡಿ ಮಾಲೀಕರ ಮೇಲೆ ಪ್ರಕರಣ ದಾಖಲಿಸುವುದಾಗಿ ಅವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಘೋಷಿಸಿರುವ 5 ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯು ಒಂದು. ರಾಜ್ಯದ ಪ್ರತಿ ಮನೆಯ ಯಜಮಾನಿಗೆ ಆರ್ಥಿಕ ಬಲ ತುಂಬುವ ಸಲುವಾಗಿ ಮಾಸಿಕ 2 ಸಾವಿರ ರೂ. ನೀಡುವ ಯೋಜನೆ ಇದಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗಷ್ಟೇ ಚಾಲನೆ ನೀಡಿದ್ದಾರೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ ಹಾಗೂ ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಕೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಗೃಹಲಕ್ಷ್ಮೀ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು ಈ ಬಗ್ಗೆ ಯಾರಾದರು ಅಸಡ್ಡೆ ತೋರಿದರೆ ಅಥವಾ ಜನರಿಂದ ದುಡ್ಡು ಪಡೆದರೆ ಅಂಥವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Gruhalakshmi Yojana: ಗೃಹಲಕ್ಷ್ಮಿ ನೋಂದಣಿಗೆ ಹಣ ಪಡೆದರೆ ಕ್ರಿಮಿನಲ್ ಕೇಸ್: ಲಕ್ಷ್ಮೀ ಹೆಬ್ಬಾಳ್ಕರ್ ಎಚ್ಚರಿಕೆ