ರಾಯಚೂರು: ಕೇಂದ್ರ ಸರ್ಕಾರ ಘೋಷಣೆ ಮಾಡಿದ 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ನಿಂದ ರೈತರು ಮತ್ತು ಶ್ರಮಿಕರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡ ಚಾಮರಸ ಮಾಲೀಪಾಟೀಲ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾದಿಂದ ರೈತ ಸಮುದಾಯ ತತ್ತರಿಸಿದೆ. ಈ ಸಮಯದಲ್ಲಿ ರೈತ ಸಹಾಯಕ್ಕೆ ನೆರವಾಗಬೇಕಿದ್ದ ಕೇಂದ್ರ, ತನ್ನ 20 ಲಕ್ಷ ಕೋಟಿ ರೂ. ಪ್ಯಾಕೇಜ್ನಿಂದ ಕೃಷಿಕರನ್ನು ಸಾಲಗಾರರನ್ನಾಗಿ ಮಾಡಲು ಹೋರಟಿದೆ ಎಂದರು.
ರೈತರ ಬಗ್ಗೆ ಕಾಳಜಿಸಿ ವಹಿಸಿ 9 ಲಕ್ಷ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದರೇ ರೈತರಿಗೆ ಉಪಯೋಗ ಆಗುತ್ತಿತ್ತು. ಅಂತಹ ಕೆಲಸವನ್ನು ಸರ್ಕಾರ ಮಾಡಲಿಲ್ಲ. ಎಪಿಎಂಸಿ ಕಾಯ್ದೆ ತಿದ್ದುಪಡಿ, ವಿದ್ಯುತ್ ಖಾಸಗೀಕರಣದಂತಹ ರೈತ ವಿರೋಧಿ ನೀತಿಗಳನ್ನು ಜಾರಿಗೆ ತರಲು ಮುಂದಾಗಿದೆ. ಇಂತಹ ಕಾಯ್ದೆಗಳನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
180 ರೈತ ಪರ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ದ ಬೃಹತ್ ಜನಾಂದೋಲನ ಹೋರಾಟ ರೂಪಿಸಿವೆ. ಈ ಬಗ್ಗೆ ಜೂ.10ರಂದು ಬೆಂಗಳೂರಿನಲ್ಲಿ ಪೂರ್ವಭಾವಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.