ಲಿಂಗಸುಗೂರು/ ರಾಯಚೂರು: ಇಂದಿನ ದಿನಗಳಲ್ಲಿ ಕೃಷಿ ಬಿಟ್ಟು ಉದ್ಯೋಗಕ್ಕಾಗಿ ನಗರದತ್ತ ಯುವ ಸಮುದಾಯ ವಲಸೆ ಹೋಗುತ್ತಿದೆ. ಆದರೆ, ಇಲ್ಲೊಬ್ಬ ರೈತ ಮೀನುಗಾರಿಕೆ ಇಲಾಖೆ ಸಹಕಾರವಿಲ್ಲದೇ ಸಿಗಡಿ ಮೀನು ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.
ಹೌದು, ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಚಿಕ್ಕ ಉಪ್ಪೇರಿ ಗ್ರಾಮದ ಯುವ ರೈತ ಚೆನ್ನಕುಮಾರ ಚಿಂಚೋಳಿ ಎಂಬುವರು ಜಮೀನು ಖರೀದಿಸಿ ಖಾಸಗಿ ತಂತ್ರಜ್ಞರು, ಅನುಭವಿ ರೈತರ ಸಹಾಯ ಪಡೆದು 15 ಎಕರೆ ಜಮೀನಲ್ಲಿ ಸಿಗಡಿ ಮೀನು ಕೃಷಿ ಆರಂಭಿಸಿ ಅಧಿಕ ಲಾಭ ಪಡೆಯುವ ಮೂಲಕ ಜಿಲ್ಲೆಯ ದಾಳಿಂಬೆ, ಪಪ್ಪಾಯಿ ಬೆಳೆಗಾರರಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಕೇವಲ 8 ನೇ ತರಗತಿ ಓದಿರುವ ಚೆನ್ನಕುಮಾರ, ಎಕರೆಗೆ 10 ಲಕ್ಷ ಖರ್ಚು ಮಾಡಿ, ಇದೀಗ ಎಕರೆಗೆ 2 ರಿಂದ 3 ಲಕ್ಷ ಹೆಚ್ಚುವರಿ ಲಾಭ ಪಡೆಯುತ್ತಿದ್ದಾರೆ. ವಿಶಾಲವಾದ ಹೊಂಡಗಳನ್ನು ನಿರ್ಮಿಸಿ, ಆಳೆತ್ತರದ ಗುಂಡಿ ಅಗೆದು ಸಮುದ್ರದ ಉಪ್ಪುನೀರಿನ ವಾತಾವರಣ ಸೃಷ್ಟಿಸಿ, ಸಿಗಡಿ ಮೀನು ಸಾಕಣೆ ಮಾಡಿದ್ದಾರೆ. ವೈವಿಧ್ಯಮಯ ತಂತ್ರಜ್ಞಾನ ಬಳಕೆ ಮಾಡಿ ಮೀನುಗಾರಿಕೆ ಇಲಾಖೆಗೆ ಸೆಡ್ಡು ಹೊಡೆದು ಯಾರ ಹಂಗೂ ಇಲ್ಲದೇ ಉತ್ತಮ ಲಾಭ ಪಡೆಯುತ್ತಿರುವ ಯುವಕನ ಸಾಹಸಕ್ಕೆ ಬಹುತೇಕ ಕೃಷಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಓದಿ: ಕೊರೊನಾಗೆ ಗೆಳೆಯ ಬಲಿ: ಸ್ನೇಹಿತನ ಮಡದಿಗೆ ಬಾಳು ಕೊಟ್ಟ ಚಾಮರಾಜನಗರದ ಯುವಕ
ಈ ಕುರಿತು 'ಈಟಿವಿ ಭಾರತ'ದೊಂದಿದೆ ಅನುಭವ ಹಂಚಿಕೊಂಡ ಕೃಷಿಕ ಚೆನ್ನಕುಮಾರ, 8 ನೇ ತರಗತಿ ಓದಿದ ನಾನು ಕಿರಾಣಿ, ಗೊಬ್ಬರ ತಯಾರಿಕೆ ಉದ್ಯೋಗ ಮಾಡುತ್ತಾ ರಾಜಕೀಯಕ್ಕೆ ಬಂದೆ. ಅಲ್ಲಿಂದ ರಿಯಲ್ ಎಸ್ಟೇಟ್ ದಂಧೆಗೆ ಇಳಿದೆ. ಆದರೆ, ಅದ್ಯಾವುದರಲ್ಲೂ ತೃಪ್ತಿ ಕಾಣದೇ ಕೃಷಿ ಕ್ಷೇತ್ರದತ್ತ ಚಿಂತನೆ ನಡೆಸಿದೆ.
ದಾಳಿಂಬೆ, ಪಪ್ಪಾಯಿ ಬೆಳೆಯುವ ಬದಲು ವಿನೂತನ ಬೆಳೆ ಬೆಳೆಯುವ ಉದ್ದೇಶದಿಂದ ಮೀನು ಕೃಷಿ ಮಾಡಲು ಮುಂದಾದೆ. ಮೀನುಗಾರಿಕೆ ಇಲಾಖೆಯಿಂದ ತಜ್ಞರ ಸಲಹೆ, ವೈದ್ಯರ ಸಹಕಾರ ದೊರೆಯದಿದ್ದರೂ ಇತರೆ ಅನುಭವಿ ರೈತರಿಂದ ಮಾಹಿತಿ ಪಡೆದು ದಿಟ್ಟ ಹೆಜ್ಜೆ ಇಟ್ಟು, ಸಿಗಡಿ ಮೀನು ಕೃಷಿಯಲ್ಲಿ ಉತ್ತಮ ಲಾಭ ಪಡೆದ ತೃಪ್ತಿ ನನಗಿದೆ ಎಂದರು.