ಲಿಂಗಸುಗೂರು(ರಾಯಚೂರು) : ಚಿತ್ತಾಪುರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚಿಕ್ಕಜಾವೂರು ಪ್ರಾಥಮಿಕ ಶಾಲಾ ಸುಧಾರಣ ಸಮಿತಿ ದೂರು ಸಲ್ಲಿಸಿದೆ.
ಚಿತ್ತಾಪುರ ಮತ್ತು ಚಿಕ್ಕಜಾವೂರು ಎರಡು ಗ್ರಾಮಗಳು ಮೂರು ದಶಕಗಳ ಹಿಂದೆ ನಾರಾಯಣಪುರ ಅಣೆಕಟ್ಟೆ ಹಿನ್ನೀರಲ್ಲಿ ಮುಳುಗಡೆ ಆಗಿದ್ದವು. ಪುನರ್ವಸತಿ ಯೋಜನೆಯಡಿ ಸ್ಥಳಾಂತರಗೊಂಡು ಅವಳಿ ಗ್ರಾಮಗಳಾಗಿ ಬೆಳೆದು ಬಂದಿವೆ. ತಾರತಮ್ಯ ಎನ್ನದಂತೆ ಆ ಗ್ರಾಮದ ಮಕ್ಕಳು ಈ ಶಾಲೆಗೆ, ಈ ಗ್ರಾಮದ ಮಕ್ಕಳು ಅ ಶಾಲೆಗೆ ಪ್ರವೇಶ ಪಡೆದು ಅಭ್ಯಾಸ ಮಾಡುತ್ತ ಬಂದಿದ್ದಾರೆ. ಆದರೆ, ಈ ವರ್ಷ ಚಿತ್ತಾಪುರ ಮುಖ್ಯ ಶಿಕ್ಷಕರ ನೀತಿ ಗ್ರಾಮಸ್ಥರ ಮಧ್ಯೆ ಬಿರುಕು ಉಂಟಾಗುವಂತಾಗಿದ ಈ ಹಿನ್ನೆಲೆ ಅವರ ವಿರುದ್ಧ ಕ್ರಮ ಜರುಗಿಸಿ ಎಂದು ಆಗ್ರಹ ಮಾಡಿದ್ದಾರೆ.
ಶಾಲಾ ಸುದಾರಣ ಸಮಿತಿ ಅಧ್ಯಕ್ಷ ಪರಶುರಾಮ ಚಿಕ್ಕಜಾವೂರ ಮಾತನಾಡಿ, ಸರ್ಕಾರಿ ಶಾಲೆ ಮುಚ್ಚಿಸುವ ಉದ್ದೇಶದಿಂದ ಮನೆ ಮನೆಗೆ ತೆರಳಿ, ನಿಮ್ಮ ಮಕ್ಕಳನ್ನು ದಾಖಲೆ ಸಮೇತ ಕರೆತರದಿದ್ದರೆ ಸರ್ಕಾರಿ ಸೌಲಭ್ಯ ನೀಡಲ್ಲ. ಭವಿಷ್ಯದಲ್ಲಿ ತೊಂದರೆ ಆಗಲಿದೆ ಎಂಬಿತ್ಯಾದಿ ಭಯ ಹುಟ್ಟಿಸಿ ಶಾಂತಿ ಸುವ್ಯವಸ್ಥೆ ಹದಗೆಡಿಸುತ್ತಿದ್ದಾರೆ ಎಂದು ಮುಖ್ಯ ಶಿಕ್ಷಕರ ವಿರುದ್ಧ ದೂರಿದರು.