ಲಿಂಗಸುಗೂರು: ಮಸ್ಕಿ ಕ್ಷೇತ್ರದ ಉಪಚುನಾವಣೆ ರಂಗೇರಿದೆ. ಈ ನಿಟ್ಟಿನಲ್ಲಿ ಸಿಎಂ ಯಡಿಯೂರಪ್ಪ ಅವರು ಮಠ, ಮಂದಿರ ಮತ್ತು ಧಾರ್ಮಿಕ ಕೇಂದ್ರಗಳಿಗೆ ಎಡತಾಕುತ್ತಿದ್ದಾರೆ. ಆದ್ರೆ ಭಾವೈಕ್ಯತೆಯ ಕೇಂದ್ರಗಳಲ್ಲಿ ಒಂದಾದ ಮುದಗಲ್ ಹುಸೇನಿ ಆಲಂ ದರ್ಗಾಕ್ಕೆ ಮುಖ್ಯಮಂತ್ರಿ ಭೇಟಿ ನೀಡದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಹಿಂದು, ಮುಸ್ಲಿಂ, ಕ್ರೈಸ್ತ ಸಮುದಾಯಗಳ ಪ್ರಾಬಲ್ಯಗಳ ಮಧ್ಯೆ ಭಾವೈಕ್ಯತೆ ಕೇಂದ್ರವಾಗಿ ಗುರುತಿಸಿಕೊಂಡ ಹುಸೇನಿ ಆಲಂ ದರ್ಗಾ ಭಕ್ತರ ಶ್ರದ್ಧಾ ಕೇಂದ್ರವಾಗಿದೆ. ಮುದಗಲ್ ಪಟ್ಟಣಕ್ಕೆ ಬರುವ ಪ್ರಮುಖರು ದೇವಾಲಯಗಳ ಜೊತೆ ದರ್ಗಾಕ್ಕೆ ಭೇಟಿ ನೀಡಿ ದರ್ಶನ ಪಡೆಯುವುದು ವಾಡಿಕೆ. ಆದರೆ ಇದೀಗ ರಾಜಕೀಯ ಮುಖಂಡರು ಮಸ್ಕಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ದೇವಸ್ಥಾನ, ಮಠಗಳಿಗೆ ತೆರಳುತ್ತಿದ್ದಾರೆ. ಆದ್ರೆ, ಹುಸೇನಿ ಆಲಂ ದರ್ಗಾದತ್ತ ಅವರು ಸುಳಿದಿಲ್ಲ.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಮುದಗಲ್ ಕೋಟೆ ಒಳಗಡೆ ಇರುವ ರಾಮಲಿಂಗೇಶ್ವರ ದೇವಸ್ಥಾನ ಮತ್ತು ರಾಘವೇಂದ್ರ ಮಠಕ್ಕೆ ಭೇಟಿ ನೀಡಿದ್ದರು. ಮಠ, ದೇವಸ್ಥಾನದ ಮಧ್ಯದಲ್ಲಿ ಇರುವ ಅದೇ ರಸ್ತೆಗೆ ಹೊಂದಿಕೊಂಡಿರುವ ಹುಸೇನಿ ಆಲಂ ದರ್ಗಾಕ್ಕೆ ಭೇಟಿ ನೀಡದಿರುವ ಬಗ್ಗೆ ದರ್ಗಾದ ಕಮಿಟಿ ಅಸಮಾಧಾನ ವ್ಯಕ್ತಪಡಿಸಿದೆ.
ಈ ಕುರಿತು ದರ್ಗಾ ಸಮಿತಿ ಅಧ್ಯಕ್ಷ ಅಮೀರಬೇಗ ಉಸ್ತಾದ, ಕಾರ್ಯದರ್ಶಿ ಸಾದಿಕ್ ಅಲಿ ಅವರನ್ನು 'ಈಟಿವಿ ಭಾರತ' ಸಂಪರ್ಕಿಸಿದಾಗ, ಸಾಂಪ್ರದಾಯಿಕವಾಗಿ ಪಟ್ಟಣಕ್ಕೆ ಬರುವ ಅಧಿಕಾರಿಗಳು, ರಾಜಕಾರಣಿಗಳು ಮಠ, ದೇವಸ್ಥಾನ, ದರ್ಗಾಕ್ಕೆ ಬರುವುದು ವಾಡಿಕೆ. ಮುಖ್ಯಮಂತ್ರಿ ಬರುತ್ತಾರೆಂದು ಕಾದು ಕುಳಿತಿದ್ದ ತಮಗೆ ಅಸಮಾಧಾನ ಮೂಡಿಸಿದೆ ಎಂದರು.