ರಾಯಚೂರು: ಮಳೆಯಿಂದ ಹಾನಿಗೀಡಾದ ಪ್ರದೇಶ ಪರಿಶೀಲನೆಗೆ ತೆರಳಿದ ವೇಳೆ ಇಲ್ಲಿನ ಸಹಾಯಕ ಆಯುಕ್ತ ಸಂತೋಷ್ ಕಾಮಗೌಡ ವೃದ್ಧೆಯೊಬ್ಬರಿಗೆ ತಮ್ಮ ಜೇಬಿನಿಂದ ಸ್ವಂತ ಹಣ ನೀಡಿ ಮಾದರಿಯಾಗಿದ್ದಾರೆ.
ತಾಲೂಕಿನ ಗುಂಜಳ್ಳಿ, ಯರಗೇರಾ, ಗಧಾರ, ಮಿರ್ಜಾಪುರ, ಇಡಪನೂರು ಹಾಗೂ ಮಿಡಗಲದಿನ್ನಿ ಗ್ರಾಮಗಳ ಸುತ್ತಮುತ್ತಲು ಭಾರೀ ಪ್ರಮಾಣದ ಮಳೆ ಸುರಿದಿದೆ. ಇದರಿಂದ ಪ್ರವಾಹ ಉಂಟಾಗಿ ಅಪಾರ ಪ್ರಮಾಣದ ನೀರು ಹರಿದು ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.
ಮೂರ್ನಾಲ್ಕು ಗ್ರಾಮದ ಸಂಪರ್ಕ ಕಡಿತಗೊಂಡಿದ್ದು, ಕೆಲವೊಂದು ಮನೆಗಳು ನೆಲಕ್ಕುರುಳಿದ್ದವು. ಪರಿಶೀಲನೆ ವೇಳೆ ಕಣ್ಣಿಗೆ ಬಿದ್ದ ವೃದ್ಧೆಯೊಬ್ಬರು, ನನ್ನ ಮನೆಯಲ್ಲಿಟ್ಟಿದ್ದ 5 ಸಾವಿರ ರೂಪಾಯಿ ನೀರಿನಲ್ಲಿ ಕೊಚ್ಚಿಹೋಗಿವೆ ಎಂದು ಅಳಲು ಹೇಳಿಕೊಂಡಿದ್ದರು. ಈ ವೇಳೆ ತಮ್ಮ ಬಳಿಯಿದ್ದ 4 ಸಾವಿರ ರೂಪಾಯಿ ನೀಡಿ ವೃದ್ಧೆಯನ್ನು ಸಮಾಧಾನ ಪಡಿಸಿ ಮಾನವೀಯ ಕಾರ್ಯ ಮಾಡಿದರು. ಸಹಾಯಕ ಆಯುಕ್ತರ ಕೆಲಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.