ರಾಯಚೂರು: ಮಹಿಳೆಯೊಬ್ಬಳು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಾಲಿಗೆ ಬಿದ್ದು ಅಳಲು ತೋಡಿಕೊಂಡ ಘಟನೆ ರಾಯಚೂರಿನಲ್ಲಿ ನಡೆದಿದೆ.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ಕೋವಿಡ್-19 ಕುರಿತ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಗೆ ತೆರಳುವ ವೇಳೆ ಮಹಿಳೆ ಡಿಸಿಎಂಗೆ ಕಾಲಿಗೆ ಬಿದ್ದು ಕಣ್ಣೀರು ಹಾಕಿದರು. ಜಿಲ್ಲೆಯ ದೇವದುರ್ಗ ತಾಲೂಕಿನ ಹೆಚ್.ಸಿದ್ದಾಪುರ ಗ್ರಾಮದಲ್ಲಿ ವಾಸಿಸುತ್ತಿರುವ ಮಹಿಳೆ ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದಳು. ಆದ್ರೆ ಎರಡು ದಿನಗಳ ಹಿಂದೆ ಅಧಿಕಾರಿಗಳು ಗರ್ಭಿಣಿಯ ಗುಡಿಸಲು ಸೇರಿದಂತೆ ಇನ್ನಿತರರ ಗುಡಿಸಲುಗಳನ್ನು ಕಿತ್ತು ಹಾಕಿದ್ದಾರೆ ಎಂದು ಅಳಲು ತೋಡಿಕೊಂಡು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
2009ನೇ ಸಾಲಿನಲ್ಲಿ ಕೃಷ್ಣಾ ನದಿ ಪ್ರವಾಹಕ್ಕೆ ಹೆಚ್.ಸಿದ್ದಾಪುರ ಗ್ರಾಮದ ಹಲವು ಕುಟುಂಬಗಳು ಬೀದಿಪಾಲಾಗಿದ್ದವು. ಆಗ ಸರ್ಕಾರ ಸೂರು ಒದಗಿಸುವ ಭರವಸೆ ನೀಡಿತ್ತು. ಆದ್ರೆ ಆಸರೆ ಮನೆಗಳನ್ನು ಅಧಿಕಾರಿಗಳು ಒದಗಿಸಿಲ್ಲ. ಹೀಗಾಗಿ ಸರ್ಕಾರ ಗುರುತಿಸಿದ ಸ್ಥಳದಲ್ಲಿ ಗುಡಿಸಲು ಹಾಕಿಕೊಂಡು ಹೆಚ್.ಸಿದ್ದಾಪುರದಲ್ಲಿ ಹಲವು ಕುಟುಂಬಗಳು ಜೀವನ ಸಾಗಿಸುತ್ತಿದ್ದವು. ಆದರೆ ಎರಡು ದಿನಗಳ ಹಿಂದಷ್ಟೇ ಅಧಿಕಾರಿಗಳು ಕೆಲವೊಂದು ಕುಟುಂಬಗಳಿಗೆ ಸೇರಿದ ಗುಡಿಸಲು ತೆರವುಗೊಳಿಸಿದ್ದಾರೆ ಎಂದು ದೂರಿದ್ದಾರೆ.
ಈ ವೇಳೆ ಸ್ಥಳದಲ್ಲಿ ಇದ್ದ ಜಿಲ್ಲಾಧಿಕಾರಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಕಾಲಿಗೆ ಬಿದ್ದ ಮಹಿಳೆಗೆ, ಹೀಗೆಲ್ಲಾ ಮಾಡಬಾರದು ಎಂದು ಸಚಿವರು ಸಮಾಧಾನ ಮಾಡಿದರು.