ರಾಯಚೂರು: ವರದಕ್ಷಿಣೆಗಾಗಿ ಗೃಹಿಣಿಗೆ ಸೀಮೆಎಣ್ಣೆ ಸುರಿದು, ಬೆಂಕಿ ಹಚ್ಚಿ ಕೊಲೆ ಮಾಡಿರುವ ಆರೋಪ ಪ್ರಕರಣ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಲಿಂಗಸೂಗೂರು ತಾಲೂಕಿನ ದೇಸಾಯಿ ಭೋಗಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಲಿಂಗಸೂಗೂರು ಸರ್ಕಾರಿ ಆಸ್ಪತ್ರೆಯ ಡಿ ದರ್ಜೆ ನೌಕರಳಾಗಿದ್ದ ತಾರಮ್ಮ(26) ಮೃತಪಟ್ಟ ಮಹಿಳೆ.
ಬಗಡಿ ತಾಂಡದ ನಿವಾಸಿಯಾಗಿದ್ದ ತಾರಮ್ಮಳನ್ನು ದೇಸಾಯಿ ಭೋಗಾಪುರ ಗ್ರಾಮದ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುವ ಬಸವರಾಜ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ವಿವಾಹದ ವೇಳೆ ವರದಕ್ಷಿಣೆ ರೂಪದಲ್ಲಿ ತಾರಮ್ಮನ ಮನೆಯವರು 2.40 ಲಕ್ಷ ರೂಪಾಯಿ ನಗದು ಹಣ, 4 ತೊಲೆ ಬಂಗಾರ ಹಾಗೂ 1 ಲಕ್ಷ ರೂಪಾಯಿ ಮೌಲ್ಯದ ಮನೆಯ ಸಾಮಗ್ರಿಗಳನ್ನ ನೀಡಿ ಮದುವೆ ಮಾಡಿ ಕೊಟ್ಟಿದ್ದರು ಎಂದು ತಿಳಿದುಬಂದಿದೆ.
ಇಷ್ಟೆಲ್ಲ ವರದಕ್ಷಿಣೆ ನೀಡಿದರೂ ಸಮಾಧಾನಗೊಳ್ಳದ ಪತಿ ಬಸವರಾಜ, ಮಾವ ಮಾರುತಿ, ಅತ್ತೆ ಸುಲೋಚನ ಮತ್ತಷ್ಟು ವರದಕ್ಷಿಣೆ ತರುವಂತೆ, ಮಾನಸಿಕ, ದೈಹಿಕವಾಗಿ ಕಿರುಕುಳ ನೀಡಿ, ಸೀಮೆಎಣ್ಣೆ ಸುರಿದು ಕೊಲೆ ಮಾಡಿದ್ದಾರೆ ಎಂದು ಮೃತ ತಾರಮ್ಮಳ ತಂದೆ ಆರೋಪಿಸಿದ್ದಾರೆ. ಈ ಕುರಿತು ಮಸ್ಕಿ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರಿನ ಆಧಾರದ ಮೇಲೆ ಮಾವ ಮಾರುತಿ, ಅತ್ತೆ ಸುಲೋಚನಾ, ಪತಿ ಬಸವರಾಜನನ್ನು ಪೊಲೀಸರು ಬಂಧಿಸಿದ್ದಾರೆ.