ರಾಯಚೂರು: ಕಾರೊಂದು ಕುರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ 30 ಕುರಿಗಳು ಸಾವನ್ನಪ್ಪಿರುವ ದಾರುಣ ಘಟನೆ ರಾಯಚೂರು ನಗರದ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ಇವು ರಾಯಚೂರು ತಾಲೂಕಿನ ಯಾಪಲದಿನ್ನಿ ಮೂಲದ ಜಗನಾಥ ಎನ್ನುವವರಿಗೆ ಸೇರಿದ ಕುರಿಗಳು ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಪಶ್ಚಿಮ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆಗಿದ್ದೇನು?: ತೆಲಂಗಾಣ ಮೂಲದ ಕಾರೊಂದು ಸಿಂಧನೂರು ಕಡೆಯಿಂದ ಬೆಳಗ್ಗೆ ಬರುತ್ತಿತ್ತು. ಇತ್ತ ಬೆಳಂಬೆಳಗ್ಗೆ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದ ಮಾರ್ಗವಾಗಿ ಕುರಿಗಾಹಿ ತನ್ನ ಕುರಿಗಳನ್ನು ಕರೆದುಕೊಂಡು ಹೋಗುತ್ತಿದ್ದ. ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಹಿಂಡಾಗಿ ಹೋಗುತ್ತಿದ್ದ ಕುರಿಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಮುಂಭಾಗದ ಬಾನೆಟ್, ಬಂಪರ್ ನುಜ್ಜುಗುಜ್ಜಾಗಿದೆ. ಇತ್ತ 30 ಮೂವತ್ತು ಕುರಿಗಳು ತೀವ್ರ ಸ್ವರೂಪದಲ್ಲಿ ಗಾಯಗೊಂಡು ರಸ್ತೆ ಮೇಲೆ ಬಿದ್ದು ಒದ್ದಾಡಿ ಪ್ರಾಣ ಬಿಟ್ಟಿವೆ. ಇನ್ನೂ ಕೆಲ ಕುರಿಗಳು ತೀವ್ರವಾಗಿ ಗಾಯಗೊಂಡಿವೆ ಎನ್ನಲಾಗುತ್ತಿದೆ. ಘಟನೆಯಿಂದ 4 ಲಕ್ಷ ರೂಪಾಯಿ ನಷ್ಟವಾಗಿದ್ದು, ದಿಕ್ಕು ತೋಚದಂತಾಗಿದೆ ಎಂದು ಕುರಿಗಾಹಿ ಜಗನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ತುಮಕೂರು ಜಿಲ್ಲೆಯ ಗೊಲ್ಲಹಳ್ಳಿಯಲ್ಲಿ ಬೆಳೆದ ದಕ್ಷಿಣ ಆಫ್ರಿಕಾ ಡಾರ್ಪರ್ ಕುರಿ ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಿ!
ಕಾರು ವಶಕ್ಕೆ: ಘಟನೆ ಕಾರಣವಾದ ಕಾರು ತೆಲಂಗಾಣದ ಪಾಸಿಂಗ್ ಹೊಂದಿದ್ದು, ಗೋವಾದಿಂದ ತೆಲಂಗಾಣಕ್ಕೆ ತೆರಳುತ್ತಿತ್ತು. ವಿಷಯ ತಿಳಿದು ಸ್ಥಳಕ್ಕೆ ದೌಡಯಿಸಿದ ಪೊಲೀಸರು ರಸ್ತೆ ಮೇಲೆ ಬಿದಿದ್ದ ಕುರಿಗಳನ್ನು ಪಕ್ಕಕ್ಕೆ ಸ್ಥಳಾಂತರ ಮಾಡಿ ಕಾರು, ಚಾಲಕ ಮತ್ತು ಕಾರಿನಲ್ಲಿದ್ದವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ದೊಡ್ಡಬಳ್ಳಾಪುರದಲ್ಲಿ ಹೆಚ್ಚಿದ ಕುರಿಗಳ ಕಳ್ಳತನ: ಗ್ರಾಮಸ್ಥರಲ್ಲಿ ಆತಂಕ
ಕುರಿ ಕಳ್ಳತನ: ದೊಡ್ಡಬಳ್ಳಾಪುರ ತಾಲೂಕಿನ ಮೇಲಿನನಾಯಕರಂಡಹಳ್ಳಿ ಗ್ರಾಮದಲ್ಲಿ ಕುರಿ ಮತ್ತು ಮೇಕೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ. ಕಳೆದ ನಾಲ್ಕು ದಿನಗಳ ಹಿಂದಷ್ಟೇ ನಾಲ್ಕು ಮೇಕೆಗಳನ್ನ ಕದ್ದೊಯ್ದಿದ್ದ ಕಳ್ಳರು, ಮರುದಿನ ಮತ್ತೆ ಗ್ರಾಮಕ್ಕೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಪದೇ ಪದೆ ಕಳ್ಳರ ಹಾವಳಿ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಂಡು ಆಗುವ ನಷ್ಟವನ್ನು ತಪ್ಪಿಸಬೇಕಿದೆ. ಕಳ್ಳರನ್ನು ಹಿಡಿದು ಜೈಲಿಗೆ ಅಟ್ಟಿ ಎಂದು ಸ್ಥಳೀಯರು ಪೊಲೀಸ್ ಇಲಾಖೆಗೆ ಒತ್ತಾಯ ಮಾಡಿದ್ದಾರೆ.
ಆಕಸ್ಮಿಕ ಬೆಂಕಿಗೆ 50 ಕುರಿಗಳು ಸಜೀವ ದಹನ: ಜನವರಿ 6ನೇ ತಾರೀಖಿನಂದು ಬಾಗೇಪಲ್ಲಿ ತಾಲೂಕಿನ ಮೂಗರೆಡ್ಡಿಪಲ್ಲಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿಗೆ ಐವತ್ತು ಕುರಿಗಳು ಸಜೀವ ದಹನವಾಗಿದ್ದವು. ಗ್ರಾಮದ ನಾರಾಯಣ ನಾಯಕ್ ಎಂಬುವರು ಜೀವನಾಧರಕ್ಕಾಗಿ ಗ್ರಾಮದ ಹೊರವಲಯದಲ್ಲಿ ಕುರಿ ಸಾಕಾಣಿಕೆ ಮಾಡಿಕೊಂಡಿದ್ದರು. ಆದರೆ ಆಕಸ್ಮಿಕ ಬೆಂಕಿ ಅವಘಡದಿಂದಾಗಿ ಕುರಿಗಾಹಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಆಕಸ್ಮಿಕ ಬೆಂಕಿ: ಐವತ್ತು ಕುರಿಗಳು ಸಜೀವ ದಹನ