ರಾಯಚೂರು: 2018-2019ನೇ ಸಾಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಹತ್ತನೇ ಘಟಿಕೋತ್ಸವ 2021ರ ಜ.9 ರಂದು ನಡೆಯಲಿದೆ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಕೆ.ಎನ್. ಕಟ್ಟಿಮನಿ ತಿಳಿಸಿದ್ದಾರೆ.
ನಗರದ ಕೃಷಿ ವಿವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿ ಆವರಣದಲ್ಲಿನ ಪ್ರೇಕ್ಷಕ ಗೃಹದಲ್ಲಿ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಘಟಿಕೋತ್ಸವದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ ಹಾಗೂ ಮುಖ್ಯ ಭಾಷಣಕಾರರಾಗಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಶಿಕ್ಷಣ ವಿಭಾಗದ ಉಪಮಹಾನಿರ್ದೇಶಕ ಡಾ. ಆರ್.ಸಿ. ಅಗರವಾಲ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಘಟಿಕೋತ್ಸವದಲ್ಲಿ ಸ್ನಾತಕ 234, ಸ್ನಾತಕೋತ್ತರ 221, 35 ಡಾಕ್ಟರೇಟ್, ಸೇರಿದಂತೆ 399 ಮಂದಿಗೆ ಪದವಿ ಪ್ರಧಾನ ಮಾಡಲಾಗುತ್ತಿದೆ. ಉತ್ತಮ ಸಾಧನೆ ತೋರಿದ 24 ಸ್ನಾತಕ, 14 ಸ್ನಾತಕೋತ್ತರ, 11 ಡಾಕ್ಟರೇಟ್ ಸೇರಿದಂತೆ 49 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಲಾಗುವುದು ಎಂದರು.
ಅಲ್ಲದೇ ಕೃಷಿ ವಿವಿ ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬೋಧನೆ, ಸಂಶೋಧನೆ ಹಾಗೂ ವಿಸ್ತರಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಸಂಶೋಧನೆಗಳನ್ನು ರೈತರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.