ಮೈಸೂರು: ರಾಜ್ಯಾದ್ಯಂತ ಸ್ವರ್ಣಗೌರಿಯ ಹಬ್ಬ ಸಂಭ್ರಮ ಮನೆ ಮಾಡಿದ್ದರೆ, ಮೊರ, ಕುಕ್ಕೆ ತಯಾರಕರ ಬದುಕು ಕೊರೊನಾ ಆರ್ಭಟದಿಂದ ದುರ್ಗಮ ಹಾದಿ ಹಿಡಿದಿದೆ.
ವರ್ಷದಲ್ಲಿ ಗೌರಿ ಹಬ್ಬದ ಹಿಂದಿನ ದಿನ ಮೈಸೂರಿನ ಅಗ್ರಹಾರ, ನಂಜುಮಳಿಗೆ ವೃತ್ತ, ಬಂಬೂ ಬಜಾರ್ ವೃತ್ತದ ಬಳಿ ಬಾಗಿನ ಮೊರ ತಯಾರು ಮಾಡಿ, ಮಾರಾಟ ಮಾಡುವ ಮೂಲಕ ನಾಲ್ಕಾಸು ಸಂಪಾದಿಸಿ ತಮ್ಮ ಹಳ್ಳಿಗಳಿಗೆ ಹಿಂತಿರುಗಬೇಕು ಎಂಬ ಆಸೆಯಿಂದ ಬಂದವರಿಗೆ ಕೊರೊನಾ ಅಡ್ಡಗಾಲು ಹಾಕಿದೆ.
ಕೊರೊನಾ ಸೋಂಕಿನಿಂದಾಗಿ ಬಾಗಿನ ಅರ್ಪಿಸಲು ಬೇಕಾಗುವ ಮೊರಗಳ ಖರೀದಿಗೆ ಜನರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಬೆವರು ಸುರಿಸಿ ಗಂಟೆಗಟ್ಟಲೆ ಕುಳಿತು ತಯಾರಿಸಿರುವ ಮೊರಗಳನ್ನು ಕೇಳುವರೇ ಇಲ್ಲದಂತಾಗಿದೆ.
ನಂಜನಗೂಡು ಪಟ್ಟಣದಿಂದ 10ಕ್ಕೂ ಹೆಚ್ಚು ಕುಟುಂಬಗಳು ಗೌರಿ ಹಬ್ಬದ ಹಿಂದಿನ ದಿನ ಅಗ್ರಹಾರ ಬಳಿ ಆಗಮಿಸಿ ಬೆಳಗ್ಗೆಯಿಂದ ಸಂಜೆಯವರೆಗೆ ಬಾಗಿನ ಮೊರಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು. ಪ್ರತಿವರ್ಷ ಇವುಗಳ ಖರೀದಿಗೆಂದು ಜನ ಗಿಜಿಗುಡುತ್ತಿದ್ದರು. ಆದರೆ ಕೊರೊನಾ ಆತಂಕಕ್ಕೆ ಒಳಗಾಗಿ ಜನರು ಖರೀದಿಗೆ ಹಿಂಜರಿಯುತ್ತಿದ್ದು ತಯಾರಕರ ಬದುಕಿಗೆ ಸಂಚಕಾರ ತಂದಿದೆ.