ಮೈಸೂರು: ನನಗೆ ಹಿನ್ನಡೆ ಯಾಕಾಯಿತು ಎಂಬ ಬಗ್ಗೆ ಮೈಸೂರು- ಕೊಡಗು ಉಸ್ತುವಾರಿ ಸಚಿವರೇ ಉತ್ತರಿಸಿಬೇಕು ಎಂದು ಪರಾಜಿತ ಅಭ್ಯರ್ಥಿ ಸಿ ಹೆಚ್. ವಿಜಯಶಂಕರ್ ಈ ಟಿವಿ ಭಾರತ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಈಗಿರುವ ಮೈತ್ರಿ, ಲೋಕಸಭೆಯಲ್ಲಿ ನಮಗೆ ಲಾಭ ತರುವ ಬದಲು ಹಾನಿಯನ್ನು ತಂದಿದೆ. ನಮಗೆ ಹೆಚ್ಚಿನ ಶಕ್ತಿ ತುಂಬುವ ಬದಲು ನಮ್ಮ ಶಕ್ತಿಯನ್ನೇ ಕಿತ್ತುಕೊಂಡಿದೆ. ಮೈತ್ರಿ ಸಂಪೂರ್ಣ ವಿಫಲವಾದಂತೆ ಕಾಣುತ್ತಿದೆ. ಎಲ್ಲಿ ವ್ಯತ್ಯಾಸವಾಯಿತು ಎಂಬ ಬಗ್ಗೆ ಕಾರಣ ಹುಡುಕುವುದು ಸರಿಯಲ್ಲ. ಮೈತ್ರಿಯಲ್ಲಿ ಎಲ್ಲರೂ ಒಂದೇ ಹಡಗಿನಲ್ಲಿ ಪ್ರಯಾಣ ಮಾಡುತ್ತಿದ್ದೇವೆ. ಹಡಗು ಮುಳುಗಿದರೆ ಎಲ್ಲರೂ ಮುಳುಗುತ್ತಾರೆ. ನನಗೆ ಅನ್ಯಾಯವಾಗಿದೆ ಎಂದರೆ ಕಾಂಗ್ರೆಸ್ಗೆ ಅನ್ಯಾಯವಾಗಿದೆ ಎಂದರ್ಥ. ಈ ಹೊಣೆಯನ್ನು ಮೈತ್ರಿಯಲ್ಲಿದ್ದವರು ಹೊರಬೇಕು ಎಂದು ತಮ್ಮ ಸೋಲಿಗೆ ನಡೆದ ಒಳಸಂಚಿನ ಬಗ್ಗೆ ಸಿ ಹೆಚ್ ವಿಜಯಶಂಕರ್ ಬೇಸರ ವ್ಯಕ್ತ ಪಡಿಸಿದರು.
ಇನ್ನು ಮಾನಸಿಕವಾಗಿ ಇಲ್ಲಿ ಮೈತ್ರಿಯೇ ಆಗಲಿಲ್ಲ ಎಂಬುದಕ್ಕೆ ಎದುರಾಳಿ ಅಭ್ಯರ್ಥಿ ಒಂದು ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆದ್ದಿರುವುದೇ ಸಾಕ್ಷಿ. ಹಾಗಾದರೆ ಜೆಡಿಎಸ್ ಮತಗಳು ಎಲ್ಲಿಗೆ ವರ್ಗಾವಣೆಯಾದವು ಎಂಬುದೇ ಪ್ರಶ್ನೆಯಾಗಿದೆ ಎಂದರು.
ಇನ್ನೆರಡು ದಿನಗಳಲ್ಲಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಅಧ್ಯಕ್ಷರನ್ನು ಭೇಟಿಯಾಗುತ್ತೇನೆ ಎಂದರು. ಪ್ರಾರಂಭದಲ್ಲಿ ಈ ಬಾರಿ ದೇಶದ ಚುನಾವಣೆಯಲ್ಲಿ ಸಂಪೂರ್ಣ ಬದಲಾವಣೆಯಾಗಿದೆ. ಮಾಜಿ ಪ್ರಧಾನಿ ಸೇರಿದಂತೆ ಮಲ್ಲಿಕಾರ್ಜುನ ಖರ್ಗೆಯವರ ಸೋಲನ್ನು ರಾಜ್ಯದ ಅಭಿವೃದ್ಧಿಗೆ ಮಾರಕ ಎಂದು ವಿಜಯಶಂಕರ್ ವಿಶ್ಲೇಷಿಸಿದರು. ನಂತರ ನಮ್ಮ ಗೆಲುವಿಗೆ ಮೈತ್ರಿ ಸರಿಯಾಗಿ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.