ಮೈಸೂರು : ತಮಿಳುನಾಡಿಗೆ ಕಾವೇರಿ ನೀರು ಬಿಟ್ಟರೂ ನಾವು ರೈತರ ಹಿತ ಕಾಪಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಆಗಸ್ಟ್ 30ರಂದು ಮೈಸೂರಿನಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮಿಗೆ ಚಾಲನೆ ಸಿಗಲಿದೆ. ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರಿಂದು ಅಧಿಕಾರಿಗಳ ಸಭೆ ನಡೆಸಿ, ಕಾರ್ಯಕ್ರಮದ ಬಗ್ಗೆ ಚರ್ಚಿಸಿದರು. ಸಭೆಯ ನಂತರ ಕಾರ್ಯಕ್ರಮ ನಡೆಯಲಿರುವ ಮಹಾರಾಜ ಕಾಲೇಜು ಮೈದಾನದಲ್ಲಿ ಸ್ಥಳ ಪರಿಶೀಲನೆ ನಡೆಸಿದರು.
ಗೃಹ ಲಕ್ಷ್ಮಿ ಇಡೀ ದೇಶದಲ್ಲೇ ದೊಡ್ಡ ಕಾರ್ಯಕ್ರಮ. ಈಗಾಗಲೇ 1.10 ಕೋಟಿ ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ. ಆಗಸ್ಟ್ 30ರಂದು ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು. ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಜಿಲ್ಲೆಯ ಫಲಾನುಭವಿಗಳು ಭಾಗವಹಿಸಲಿದ್ದಾರೆ. ಇದಕ್ಕಾಗಿ 2,000 ಬಸ್ಗಳ ವ್ಯವಸ್ಥೆಯಾಗಿದೆ. ಫಲಾನುಭವಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ರಾಜ್ಯಾದ್ಯಂತ ಏಕಕಾಲದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಆನ್ಲೈನ್ ಮೂಲಕ ಸಂವಾದಕ್ಕೂ ವ್ಯವಸ್ಥೆ ನಡೆದಿದೆ ಎಂದು ಡಿಕೆಶಿ ಮಾಹಿತಿ ನೀಡಿದರು.
ಇದನ್ನೂ ಓದಿ: ಮೈಸೂರಿನಲ್ಲಿ 3,200 ಉದ್ಯೋಗ ಸೃಷ್ಟಿಯ ಸೆಮಿ ಕಂಡಕ್ಟರ್ ಘಟಕ ಸ್ಥಾಪನೆ ಒಡಂಬಡಿಕೆಗೆ ಸಹಿ
ಗೃಹ ಲಕ್ಷ್ಮಿ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಕುಡಿಯುವ ನೀರು ಬಿಟ್ಟರೆ ಬೇರೇನೂ ವ್ಯವಸ್ಥೆ ಇರುವುದಿಲ್ಲ. 140 ಅಡಿ ಸ್ಕ್ರೀನ್ ಅಳವಡಿಸಲಾಗಿದೆ. ಇದು ಸರ್ಕಾರಿ ಕಾರ್ಯಕ್ರಮ. ಎಲ್ಲಾ ಪಕ್ಷದ ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು. ಕಾರ್ಯಕ್ರಮಕ್ಕಾಗಿ ಒಂದು ಲಕ್ಷ ಚೇರ್ಗಳನ್ನು ಅಳವಡಿಸಲಾಗುವುದು ಎಂದರು.
ಮಹಾರಾಜ ಕಾಲೇಜು ಮೈದಾನದಲ್ಲಿ ಸಿದ್ದವಾಗುತ್ತಿರುವ ಬೃಹತ್ ವೇದಿಕೆಯ ಸ್ಥಳ ಪರಿಶೀಲನೆಯ ವೇಳೆ ಡಿಕೆಶಿ ಜೊತೆ ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹಾದೇವಪ್ಪ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸಚಿವ ಚಲುವರಾಯಸ್ವಾಮಿ ಸೇರಿದಂತೆ ಶಾಸಕರು, ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್ ಸೇರಿದಂತೆ ಹಲವು ಪ್ರಮುಖ ಅಧಿಕಾರಿಗಳು ಹಾಜರಿದ್ದರು.
ಇದನ್ನೂ ಓದಿ: ನಾವು ಆಪರೇಷನ್ ಹಸ್ತ ಮಾಡುತ್ತಿಲ್ಲ, ಅವರಾಗಿಯೇ ಬಂದರೆ ಸ್ವಾಗತಿಸುತ್ತೇವೆ: ಡಿಸಿಎಂ ಡಿ.ಕೆ.ಶಿವಕುಮಾರ್