ಮೈಸೂರು: ವೀಸಾ ರದ್ದುಗೊಂಡಿದ್ದ ವಿದೇಶಿ ಯುವತಿಯರು ಪರಾರಿಯಾಗಿರುವ ಘಟನೆ ಇಲ್ಲಿನ ವಿಜಯನಗರದಲ್ಲಿ ನಡೆದಿದೆ. ವೀಸಾ ರದ್ದಾದರೂ ಬೆಂಗಳೂರಲ್ಲಿ ನೆಲೆಸಿದ್ದ ಇವರನ್ನು ವಶಕ್ಕೆ ಪಡೆದು ಮೈಸೂರಿನ ಸ್ಟೇಟ್ ವುಮೆನ್ಸ್ ಹೋಮ್ನಲ್ಲಿ ಇರಿಸಲಾಗಿತ್ತು.
ಉಗಾಂಡ ದೇಶದ ಪ್ರಜೆಗಳಾದ ನಿಹಾನ್ ಹಾಗೂ ಲಿಹಂಸ್ ಎಂಬ ಯುವತಿಯರು ಕಾವಲುಗಾರರ ಕಣ್ತಪ್ಪಿಸಿ ಪರಾರಿಯಾಗಿದ್ದಾರೆ. ಮೂರು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಪೊಲೀಸರ ವಿರುದ್ಧವೇ ಉಗಾಂಡ ಪ್ರಜೆಗಳು ಗಲಾಟೆ ನಡೆಸಿದ್ದರು. ಬಳಿಕ ಅವರ ವೀಸಾ ಪರಿಶೀಲಿಸಿದಾಗ ವೀಸಾ ಅವಧಿ ಮುಕ್ತಾಯವಾಗಿದ್ದು, ಈ ಹಿನ್ನೆಲೆ ಅವರನ್ನು ವಶಕ್ಕೆ ಪಡೆಯಲಾಗಿತ್ತು.
ಹೀಗೆ ವಶಕ್ಕೆ ಪಡೆದವರ ಪೈಕಿ ಇಬ್ಬರು ಯುವತಿಯರನ್ನು ಮೈಸೂರಿನ ಸ್ಟೇಟ್ ವುಮೆನ್ಸ್ ಹೋಮ್ನಲ್ಲಿ ಇರಿಸಿದ್ದರು. ಶನಿವಾರ ರಾತ್ರಿ ಊಟದ ನಂತರ ಕಾವಲುವಾರರ ಕಣ್ತಪ್ಪಿಸಿ ಇಬ್ಬರು ಪರಾರಿಯಾಗಿದ್ದಾರೆ.
ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವತಿಯರ ಪತ್ತೆಗೆ ತಂಡ ರಚಿಸಲಾಗಿದೆ. ಯುವತಿಯರು ಬೆಂಗಳೂರಿನಲ್ಲಿರುವ ಮಾಹಿತಿ ಲಭ್ಯವಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ. ಶೀಘ್ರವೇ ಪತ್ತೆ ಮಾಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪ್ರೀತಿಸಿ ವಂಚನೆಗೊಳಗಾದ ಯುವತಿ ಆತ್ಮಹತ್ಯೆ ಪ್ರಕರಣ: ಎಎಸ್ಐ ಸೇರಿ 8 ಮಂದಿ ವಿರುದ್ಧ ಎಫ್ಐಆರ್