ಮೈಸೂರು: ರಾಜ್ಯದಲ್ಲಿ ಧಾರ್ಮಿಕದತ್ತಿ ಇಲಾಖೆ ಅಧೀನಕ್ಕೆ ಒಳಪಡುವ ಎಲ್ಲಾ ದೇವಾಲಯಗಳಲ್ಲಿ ಕೋವಿಡ್ ನಿಯಮ ಪಾಲಿಸಲು ಸೂಚಿಸಲಾಗಿದೆ. ಸದ್ಯಕ್ಕೆ ಯಾವ ದೇವಾಲಯಗಳನ್ನು ಲಾಕ್ಡೌನ್ ಮಾಡುವುದಿಲ್ಲ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಇಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ, ತಮ್ಮ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಮಾಧ್ಯಮಗಳ ಜೊತೆ ಮಾತನಾಡಿದರು. ಇದೇ ವೇಳೆ ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆ ಬಗ್ಗೆ ಮಾತನಾಡಿ, ಬಿಜೆಪಿ ಪಕ್ಷ ಗೆಲುವು ಸಾಧಿಸಲಿದೆ ಎಂದರು. ಇನ್ನೂ ಸಪ್ತಪದಿ ಕಾರ್ಯಕ್ರಮ ರಾಜ್ಯದಲ್ಲಿ ಯಶಸ್ವಿಯಾಗಿದ್ದು, ಮುಂದೆಯೂ ಸಹ ಮುಂದುವರೆಯಲಿದೆ. ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಹಾಸ್ಟೆಲ್ಗಳಿಗೆ ಸ್ವಂತ ಕಟ್ಟಡ ನೀಡಲು ಕೇಂದ್ರ ಸರ್ಕಾರದ ಸಹಾಯ ಕೇಳಲಾಗಿದೆ ಎಂದರು.
ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭೆ ಹಾಗೂ ಲೋಕಸಭೆಯ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವುದರಿಂದ ನಮಗೆ ಭಯವಿಲ್ಲ. ನಮ್ಮ ಅಭ್ಯರ್ಥಿಗಳು ಗೆಲವು ಸಾಧಿಸುತ್ತಾರೆ. ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ, ಹಿನ್ನಡೆಯೂ ಆಗುವುದಿಲ್ಲ. ನಾವು ಯಡಿಯೂರಪ್ಪ ನೇತೃತ್ವದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಮಾಡುತ್ತಿದ್ದೇವೆ. ಉಪಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಹೇಳಿದರು.
ಓದಿ:ಮುಜರಾಯಿ ಇಲಾಖೆ ನೌಕರರಿಗೂ 6ನೇ ವೇತನ ನೀಡಲಾಗುವುದು: ಕೋಟ ಶ್ರೀನಿವಾಸ ಪೂಜಾರಿ
ಸಚಿವರ ಸಿಡಿ ಪ್ರಕರಣ ವ್ಯಕ್ತಿಗತ ವಿಚಾರ, ಸುಧಾಕರ್ ವಿಚಾರ ಅವರ ವೈಯಕ್ತಿಕ. ಇದರ ಬಗ್ಗೆ ಸದನದ ಹೊರಗೆ ಮತ್ತು ಒಳಗೆ ಚರ್ಚೆ ಆಗಿದೆ. ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಇಲಾಖೆ ಬಗ್ಗೆ ಗೊಂದಲವಿದ್ದರೆ ಕೇಳಿ ಎಂದರು.