ಮೈಸೂರು: ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಸಂಶೋಧನೆಯಾಗಬೇಕಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಮಾನಸಗಂಗೋತ್ರಿಯಲ್ಲಿರುವ ಡಾ.ಅಂಬೇಡ್ಕರ್ ಸಂಶೋಧನಾ ಕೇಂದ್ರ ವಿಶ್ವಜ್ಞಾನಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಾಲತಾಣ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಬಂದು 74 ವರ್ಷಗಳು ಕಳೆಯುತ್ತ ಬಂದಿದ್ದರೂ ಇಂದಿಗೂ ದಲಿತರ ಮೇಲೆ ದೌರ್ಜನ್ಯ ನಿಂತಿಲ್ಲ. ದೌರ್ಜನ್ಯ ತಡೆಗಟ್ಟಲು ಹಾಗೂ ದಲಿತರ ಅಭಿವೃದ್ಧಿಗಾಗಿ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ನಡೆಯಬೇಕಿದೆ ಎಂದರು.
ಅಂಬೇಡ್ಕರ್ ಅವರ ಹೆಸರನ್ನು ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಬಳಸಿಕೊಳ್ಳುತ್ತವೆ. ಆದರೆ, ಚುನಾವಣೆ ನಂತರ ಅದೆಲ್ಲ ಮರೆತು ಬಿಡುತ್ತಾರೆ. ಅಂಬೇಡ್ಕರ್ ಆಶಯಗಳು ಸಮಾಜದಲ್ಲಿ ಈಡೇರಿಸಿದಾಗ ಮಾತ್ರ ಬದಲಾವಣೆ ಸಾಧ್ಯ ಎಂದು ತಿಳಿಸಿದರು.
ಅಂಬೇಡ್ಕರ್ ನೀಡಿದ ಸಂವಿಧಾನದ ಕೊಡುಗೆಯಿಂದ ದೇಶಕ್ಕೆ ಒಳಿತಾಗಿದೆ. ಸಣ್ಣಪುಟ್ಟ ಸಮುದಾಯಗಳು ರಾಜಕೀಯ ಪ್ರವೇಶಿಸಿ, ತಮ್ಮ ಹಕ್ಕುಗಳನ್ನು ಪಡೆಯಲು ಸಂವಿಧಾನ ಶಕ್ತಿಯಾಗಿದೆ ಎಂದರು.