ಮೈಸೂರು: ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘ ಮಾಡಿರುವ ಶೇ.40ರಷ್ಟು ಕಮಿಷನ್ ಆರೋಪ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿಯವರು ನ್ಯಾಯಾಂಗ ತನಿಖೆಗೆ ಒಪ್ಪಿಕೊಳ್ಳುವಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.
ನಗರದಲ್ಲಿ ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಮಾಧ್ಯಮದವರ ಜೊತೆ ಪ್ರಸ್ತುತ ವಿಚಾರಗಳ ಕುರಿತು ಸಂವಾದ ನಡೆಸಿದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 3 ವರ್ಷಗಳಿಗಿಂತ ಹೆಚ್ಚಾಗಿದೆ. ಜನರ ಆಶೀರ್ವಾದದೊಂದಿಗೆ ಬಂದ ಸರ್ಕಾರವಲ್ಲ, ಅನೈತಿಕವಾಗಿ ರಚನೆಯಾಗಿರುವ ಸರ್ಕಾರ ಎಂದು ಟೀಕಿಸಿದರು.
ಯಡಿಯೂರಪ್ಪ ನಂತರ ಬಸವರಾಜ ಬೊಮ್ಮಾಯಿ ಸಿಎಂ ಆಗಿ ಎರಡು ವರ್ಷಗಳ ಆಡಳಿತ ಮಾಡಿದ್ದಾರೆ. ಆದರೆ, ಅಧಿಕಾರಕ್ಕೆ ಬಂದು 3 ವರ್ಷಗಳು ಕಳೆದರೂ ಬಿಜೆಪಿ ಪ್ರಣಾಳಿಕೆಯ ಶೇ.10ರಷ್ಟು ಕೂಡ ಭರವಸೆ ಈಡೇರಿಸಿಲ್ಲ. ಇತ್ತೀಚೆಗೆ ಉಮೇಶ್ ಕತ್ತಿ ಕೇಂದ್ರ ಸರ್ಕಾರ ಒಪ್ಪಿಕೊಂಡರೆ ಬಡವರಿಗೆ ಅಕ್ಕಿ ಕೊಡುವುದನ್ನು ನಿಲ್ಲಿಸುತ್ತೇವೆ ಎಂದು ಹೇಳಿದ್ದಾರೆ. ಇದಕ್ಕೆ ಅಕ್ಕಿ ಕೊಡಲು ದುಡ್ಡಿಲ್ಲದೆ ಇರಬಹುದು ಹಾಗೂ ಇನ್ನೊಂದು ಹಸಿದವರ ಮತ್ತು ಬಡವರ ಮೇಲೆ ಅವರಿಗೆ ವಿರೋಧ ಇರಬಹುದು ಎಂದು ವಾಗ್ದಾಳಿ ನಡೆಸಿದರು.
ಮುಗಿಲು ಮುಟ್ಟಿದ ಭ್ರಷ್ಟಾಚಾರ: ಈ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಈ ಬಗ್ಗೆ ರಾಜ್ಯದ ಜನ ಮಾತನಾಡುತ್ತಿದ್ದಾರೆ, ವಿಧಾನಸೌಧದ ಗೋಡೆಗಳು ಹೇಳುತ್ತಿವೆ, ಅಧಿಕಾರಿಗಳು, ರಾಜ್ಯ ಗುತ್ತಿಗೆದಾರರ ಸಂಘದವರು ಹೇಳುತ್ತಿದ್ದಾರೆ. ಗುತ್ತಿಗೆದಾರರ ಸಂಘದವರು ಎರಡನೇ ಬಾರಿ ಮಾಧ್ಯಮದ ಮುಂದೆ ಬಂದು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಪಿಎಸ್‌ಐ ನೇಮಕಾತಿ ಏನಾಗಿದೆ?: ಪಿಎಸ್‌ಐ ನೇಮಕಾತಿಗೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಯಾವ ಭ್ರಷ್ಟಾಚಾರ, ಅಕ್ರಮ ನಡೆದಿಲ್ಲ. ಕಾನೂನು ರೀತಿ ನೇಮಕಾತಿ ನಡೆದಿದೆ ಎಂದಿದ್ದರು. ಇದೇ ರೀತಿ ಮುಖ್ಯಮಂತ್ರಿ ಹೇಳಿಕೆ ನೀಡಿದ್ದರು. ಆದರೆ ಈಗ ಏನಾಗಿದೆ?. ಎಡಿಜಿಪಿ ಅಮೃತ್ ಪೌಲ್ 300 ಅಭ್ಯರ್ಥಿಗಳಿಂದ 30ಲಕ್ಷದಿಂದ 1 ಕೋಟಿ ವರೆಗೆ ಹಣ ವಸೂಲಿ ಮಾಡಿದ್ದಾರೆ. ಇದರಲ್ಲಿ ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳು ತನಿಖೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಇವರೆಲ್ಲರೂ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ. ಸತ್ಯ ಹೊರಬರಬೇಕಾದರೆ ನ್ಯಾಯಾಂಗ ತನಿಖೆಯಿಂದ ಮಾತ್ರ ಸಾಧ್ಯ ಎಂದು ಸಿದ್ದರಾಮಯ್ಯ ತಿಳಿಸಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಮಾಡಿದ ಭ್ರಷ್ಟಾಚಾರ ಮುಚ್ಚಿ ಹಾಕಲು ನಮ್ಮ ಸರ್ಕಾರ ಶ್ರಮಿಸುತ್ತಿದೆ.. ಶ್ರೀರಾಮುಲು
80 ಸಾವಿರ ಕೋಟಿ ಸಾಲ ಮಾಡಿದೆ: ಸ್ವಾತಂತ್ರ್ಯ ಬಂದ ನಂತರದಿಂದ 2018ರ ಬಜೆಟ್ ಮಂಡನೆ ಮಾಡುವ ವೇಳೆಗೆ ಕರ್ನಾಟಕದ ಮೇಲಿದ್ದ ಒಟ್ಟು ಸಾಲ 2 ಲಕ್ಷದ 42 ಸಾವಿರ ಕೋಟಿ. ಇದು ಈ ವರ್ಷದ ಕೊನೆಗೆ 5 ಲಕ್ಷದ 40 ಸಾವಿರ ಕೋಟಿಗೆ ಹೆಚ್ಚಾಗುತ್ತದೆ. 14 ಸಾವಿರ ಕೋಟಿ ಅಸಲು ಮತ್ತು 29 ಸಾವಿರ ಕೋಟಿ ಬಡ್ಡಿ ಸೇರಿ 43 ಸಾವಿರ ಕೋಟಿ ರೂಪಾಯಿ ಕಟ್ಟಬೇಕು. ಈ ಹಣ ಅಭಿವೃದ್ಧಿ ಕಾರ್ಯಗಳಿಗೆ ಸಿಗುವುದಿಲ್ಲ. ಇವೆಲ್ಲಾ ಬದ್ಧತಾ ಖರ್ಚುಗಳು. ಹಾಗಾಗಿ ಕಳೆದ ಮೂರು ವರ್ಷದಿಂದ ರಾಜಸ್ವ ಕೊರತೆ ಉಂಟಾಗಿದೆ. ರಾಜಸ್ವ ಸಂಗ್ರಹಕ್ಕಿಂತ, ಖರ್ಚು ಹೆಚ್ಚಾಗಿದೆ. ಈ ಹಿಂದೆ ನಾವು 20ರಿಂದ 22 ಸಾವಿರ ಕೋಟಿ ಸಾಲ ತೆಗೆದುಕೊಳ್ಳುತ್ತಿದ್ದೆವು. ಈ ವರ್ಷ ಸರ್ಕಾರ 80 ಸಾವಿರ ಕೋಟಿ ಸಾಲ ಮಾಡಿದೆ ಎಂದು ಅವರು ವಿವರಿಸಿದರು.
ಇದನ್ನೂ ಓದಿ: ಗಣೇಶನಿಗೂ ಸಾವರ್ಕರ್ಗೂ ಏನು ಸಂಬಂಧ?: ಡಿ.ಕೆ ಶಿವಕುಮಾರ್ ಪ್ರಶ್ನೆ
ಪ್ರತಾಪ್ ಸಿಂಹ ಯಕಶ್ಚಿತ್ ರಾಜಕಾರಣಿ: ಪ್ರತಾಪ್ ಸಿಂಹನಿಗೆ ಸತ್ಯ ಹೇಳಿಯೇ ಗೊತ್ತಿಲ್ಲ, ಅವನೊಬ್ಬ ಯಕಶ್ಚಿತ್ ರಾಜಕಾರಣಿ. ನಮ್ಮ ಪಕ್ಷದ ಲಕ್ಷ್ಮಣ್ ಸೇರಿದಂತೆ ಅನೇಕರು ಅವರಿಗೆ ಸವಾಲು ಹಾಕಿದ್ದಾರೆ. ಅವರ ಜೊತೆ ಚರ್ಚೆಗೆ ಹೋಗಲಿ. ನಾನು ಮುಖ್ಯಮಂತ್ರಿಯಾಗಿ 5 ವರ್ಷದಲ್ಲಿ ಮೈಸೂರು ನಗರಕ್ಕೆ ಏನು ಮಾಡಿದ್ದೇನೆ. ಪ್ರತಾಪ್ ಸಿಂಹ ಸಂಸದರಾಗಿ ಏನು ಮಾಡಿದ್ದಾರೆ ಎಂದು ಚರ್ಚೆ ಮಾಡಲಿ. ಮಹಾರಾಣಿ ಕಾಲೇಜು ಕಟ್ಟಿಸಿದ್ದು, ಜಿಲ್ಲಾಸ್ಪತ್ರೆ, ಜಯದೇವ ಆಸ್ಪತ್ರೆ ಕಟ್ಟಿಸಿದ್ದು, ಹೆರಿಗೆ ಆಸ್ಪತ್ರೆ ಕಟ್ಟಿಸಿದ್ದು, ಜಯಚಾಮರಾಜೇಂದ್ರ ಪ್ರತಿಮೆ ನಿರ್ಮಾಣ ಮಾಡಿದ್ದು ಪ್ರತಾಪ್ ಸಿಂಹನಾ?, ಮೊದಲು ಲಕ್ಷ್ಮಣ್ ಜೊತೆ ಚರ್ಚೆ ಮಾಡಿ ನಂತರ ನನ್ನ ಬಳಿ ಬರಲಿ ಎಂದು ಕುಟುಕಿದರು.
ಇದನ್ನೂ ಓದಿ: ಸಿದ್ದರಾಮೋತ್ಸವ ನಡೆಸಿದರೂ ಸಿದ್ದು ರಾಜಕೀಯ ಅಲೆಮಾರಿ: ವಿ ಶ್ರೀನಿವಾಸ್ ಪ್ರಸಾದ್ ವ್ಯಂಗ್ಯ