ಮೈಸೂರು: ಕೆಲಸ ಅರಸಿ ಬಂದಿದ್ದ ಬಿಹಾರ ಮೂಲದ ವಲಸೆ ಕಾರ್ಮಿಕರನ್ನು ವಿಶೇಷ ರೈಲಿನ ಮೂಲಕ ಬಿಹಾರಕ್ಕೆ ಕಳುಹಿಸಿಕೊಡಲಾಯಿತು.
ಮೈಸೂರು ರೈಲ್ವೆ ನಿಲ್ದಾಣದಿಂದ 1170 ವಲಸೆ ಕಾರ್ಮಿಕರನ್ನು ಶ್ರಮಿಕ್ ರೈಲಿನ ಮೂಲಕ ಬಿಹಾರದ ಪೂರ್ಣಿಯಾಕ್ಕೆ ಕಳುಹಿಸಿಕೊಡಲಾಯಿತು. ರಾಜ್ಯ ಸರ್ಕಾರವೇ ಇವರ ಟಿಕೆಟ್ ದರವನ್ನು ಭರಿಸಿದೆ. ಮೈಸೂರಿನಿಂದ 700 ಮಂದಿ, ಕೊಡಗಿನಿಂದ 60 ಮಂದಿ, ಚಾಮರಾಜನಗರದಿಂದ 40 ಮಂದಿ ಮತ್ತು ಮಂಡ್ಯದಿಂದ 370 ಮಂದಿ ಈ ರೈಲಿನಲ್ಲಿ ತೆರಳಿದ್ದಾರೆ.
![Sent to migrant workers to Bihar from mysore](https://etvbharatimages.akamaized.net/etvbharat/prod-images/kn-mys-1-migrant-labourers-news-7208092_25052020084605_2505f_1590376565_436.jpg)
ಈ ರೈಲು ಮೇ 26 ಮಧ್ಯಾಹ್ನ 1.10ಕ್ಕೆ ಬಿಹಾರದ ಪೂರ್ಣಿಯಾ ನಿಲ್ದಾಣ ತಲುಪುತ್ತದೆ. ಈ ಎಲ್ಲಾ ವಲಸೆ ಕಾರ್ಮಿಕರಿಗೆ ರೋಟರಿ ಕ್ಲಬ್ನಿಂದ ಆಹಾರ ಮತ್ತು ನೀರನ್ನು ವಿತರಿಸಲಾಯಿತು. ರೈಲ್ವೆ ರಕ್ಷಣಾ ದಳದ 6 ಮಂದಿ ರೈಲಿನಲ್ಲಿ ಸುರಕ್ಷತಾ ದೃಷ್ಟಿಯಿಂದ ಪ್ರಯಾಣ ಮಾಡುತ್ತಿದ್ದು, ವಲಸೆ ಕಾರ್ಮಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ರೈಲ್ವೆ ಇಲಾಖೆ ಸೂಚಿಸಿದೆ. ರೈಲು ಹೊರಡುವ ಮುನ್ನ ಎಲ್ಲಾ ಬೋಗಿಗಳನ್ನು ಸ್ಯಾನಿಟೈಸರ್ ಮಾಡಲಾಗಿತ್ತು.