ಮೈಸೂರು: ಚಾಮರಾಜನಗರದಲ್ಲಿ 24 ಕೋವಿಡ್ ಸೋಂಕಿತರ ಸಾವಿಗೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾಧಿಕಾರಿಗಳ ನಿರ್ಲಕ್ಷ್ಯ ಕಾರಣ. ಹಾಗಾಗಿ ಇಬ್ಬರ ವಿರುದ್ದ ದೂರು ದಾಖಲಿಸಿ ನಿಷ್ಠಾವಂತ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕೆಂದು ಶಾಸಕ ಸಾ.ರಾ ಮಹೇಶ್ ಆಗ್ರಹಿಸಿದರು.
ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರ ಕೇವಲ 3 ಜನ ರೋಗಿಗಳು ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದಾರೆ ಎಂದು ಹೇಳುತ್ತಿದ್ದೆ. ಮೂರು ಜನರ ಸಾವಾದರೂ, ಅದು ಸಾವೇ. ಸರಿಯಾದ ಸಮಯಕ್ಕೆ ಮೈಸೂರಿನಿಂದ ಆಕ್ಸಿಜನ್ ಪೂರೈಕೆ ಆಗದ ಕಾರಣ ದುರಂತ ಸಂಭವಿಸಿದೆ. ಈ ಬಗ್ಗೆ ದೂರು ದಾಖಲಿಸಿ ತನಿಖೆ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಆಕ್ಸಿಜನ್ ದುರಂತದ ವರದಿ ಸಲ್ಲಿಕೆಗೆ 3 ದಿನ ಅವಕಾಶ ಇದೆ, ಸದ್ಯಕ್ಕೆ ಚರ್ಚೆ ಬೇಡ: ಕಳಸದ್
ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೂಡಲೇ ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಮೈಸೂರಿಗೆ ಹಿರಿಯ ಮತ್ತು ಅನುಭವಿ ಅಧಿಕಾರಿಯೊಬ್ಬರನ್ನು ನೇಮಿಸಬೇಕು. ಈಗ ಇರುವ ಜಿಲ್ಲಾಧಿಕಾರಿ ಉದ್ಧಟತನದಿಂದ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಇವರ ಉದ್ದಟತನಕ್ಕೆ ಚಾಮರಾಜನಗರದಲ್ಲಿ 24 ಜೀವಗಳು ಬಲಿಯಾದವು. ಪ್ರತಿ ದಿನ ಚಾಮರಾಜನಗರಕ್ಕೆ 100 ಆಕ್ಸಿಜನ್ ಸಿಲಿಂಡರ್ ನೀಡಬೇಕು. ಆದರೆ ಮೈಸೂರಿನಿಂದ ಹೋಗಬೇಕಾದ ಸಿಲಿಂಡರ್ ನೀಡದಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದು ಸಮಸ್ಯೆಗೆ ಕಾರಣ ಎಂದರು.
ಕೊರೊನಾ ಹೆಸರಿನಲ್ಲಿ ಜಿಲ್ಲಾಡಳಿತದಿಂದ ನಕಲಿ ಬಿಲ್ಗಳನ್ನು ಸೃಷ್ಟಿಸಿ ಲೂಟಿ ನಡೆಸಲಾಗುತ್ತಿದೆ. ಈ ಬಗ್ಗೆ ಮಾಹಿತಿ ಹಕ್ಕಿನ ಅಡಿ ದಾಖಲೆಗಳನ್ನು ಪಡೆಯಲಾಗಿದೆ ಎಂದು ಅವರು ದಾಖಲೆಗಳನ್ನು ಬಿಡುಗಡೆ ಮಾಡಿದರು.