ಮೈಸೂರು : ಕೋವಿಡ್ ಭೀತಿಯಿಂದ ಕಳೆದ ಎರಡು ವರ್ಷಗಳಿಂದ ನಷ್ಟದಲ್ಲಿದ್ದ ರಿಯಲ್ ಎಸ್ಟೇಟ್ ಉದ್ಯಮ ಈಗ ಚೇತರಿಕೆ ಕಾಣುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮೈರಿಯಾಲ್ಟಿಗೆ ಹೆಚ್ಚು ಜನ ಬರುತ್ತಿರುವುದೇ ಉದಾಹರಣೆಯಾಗಿದೆ.
ಬೆಂಗಳೂರನ್ನು ಬಿಟ್ಟರೆ ಅತಿ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ನಗರ ಸಾಂಸ್ಕೃತಿಕ ನಗರಿಯಾಗಿದ್ದು, ಇಲ್ಲಿಗೆ ನಿವೇಶನ ಕೊಳ್ಳಲು, ಮನೆ ಖರೀದಿಸಲು, ಫ್ಲಾಟ್ ಕೊಳ್ಳಲು ಬೇರೆ ಕಡೆಯಿಂದ ಹೆಚ್ಚು ಹೆಚ್ಚು ಜನ ಬರುತ್ತಿದ್ದಾರೆ. ಇದಕ್ಕೆ ಕಾರಣ ಮೈಸೂರು - ಬೆಂಗಳೂರು ನಡುವಿನ ದಶಪಥ ರಸ್ತೆ, ವಿಮಾನಯಾನ, ಜೋಡಿ ರೈಲು ಮಾರ್ಗ, ಬುಲೆಟ್ ಟ್ರೈನ್ ಪ್ರಸ್ತಾವನೆ, ರಿಂಗ್ ರಸ್ತೆಗಳ ನಿರ್ಮಾಣ, ಸಾಂಸ್ಕೃತಿಕ ನಗರಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಕೋವಿಡ್ ನಂತರ ಚೇತರಿಕೆ ಕಾಣಲು ಕಾರಣವಾಗಿದೆ.
ಕೋವಿಡ್ ನಂತರ ಮೊದಲ ಬಾರಿಗೆ ಮೈರಿಯಾಲ್ಟಿ-2021 ಪ್ರದರ್ಶನ ಪ್ರಾರಂಭವಾಗಿದ್ದು, ಈ ಪ್ರದರ್ಶನಕ್ಕೆ ಹೆಚ್ಚು ಹೆಚ್ಚು ಜನ ಆಗಮಿಸುತ್ತಿದ್ದಾರೆ. ಈ ಬಗ್ಗೆ ಈ ಪ್ರದರ್ಶನದ ಆಯೋಜಕ ಉದಯ್, 'ಈ ಟಿವಿ ಭಾರತ' ಜೊತೆ ಮಾತನಾಡಿ, ಕೋವಿಡ್ ಸಮಯದಲ್ಲಿ ಮನೆಯಲ್ಲೇ ಕೆಲಸ ಮಾಡಲು ಶುರುವಾದ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಮನೆ ಬೇಕು ಎಂಬ ಆಸೆ ಚಿಗುರೊಡೆದಿದ್ದು, ಇದಕ್ಕೆ ಕೋವಿಡ್ ನಂತರ ಮೊದಲ ಬಾರಿಗೆ ಆಯೋಜನೆ ಮಾಡಿದ್ದ ಮೈರಿಯಾಲ್ಟಿಗೆ ಹೆಚ್ಚು ಹೆಚ್ಚು ಜನ ಬರುತ್ತಿದ್ದಾರೆ.
ಅದರಲ್ಲಿ ಮನೆ, ನಿವೇಶನ, ಫ್ಲಾಟ್ ಗಳನ್ನು ಕೊಳ್ಳಲು ಬಯಸುತ್ತಿದ್ದಾರೆ. ಇದರಿಂದ ಮೈಸೂರಿನಲ್ಲಿ ಮತ್ತೆ ರಿಯಲ್ ಎಸ್ಟೇಟ್ ಉದ್ಯಮ ಚೇತರಿಕೆ ಹಾದಿಯಲ್ಲಿದೆ ಎಂದು ವಿವರಿಸಿದರು.