ಪಿಎಸ್ಐ ನೇಮಕ ಹಗರಣ: ಮೈಸೂರು ಟ್ರಾಫಿಕ್ ಪಿಎಸ್ಐ ಭಾಗಿ ಆರೋಪ, ಆಡಿಯೋ ಬಿಡುಗಡೆ ಮಾಡಿದ ಕಾಂಗ್ರೆಸ್ - Mysore Traffic PSI ashwini
ಪಿಎಸ್ಐ ನೇಮಕಾತಿ ಹಗರಣ ಪ್ರಕರಣದಲ್ಲಿ ಮೈಸೂರಿನ ಎನ್.ಆರ್.ಸಂಚಾರ ಠಾಣೆ ಪಿಎಸ್ಐ ಅವರು ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಆರೋಪಿಸಿದರು.
ಮೈಸೂರು: ಪಿಎಸ್ಐ ಪರೀಕ್ಷೆಯ ಸಂದರ್ಭದಲ್ಲಿ ಮೈಸೂರಿನ ಎನ್.ಆರ್.ಸಂಚಾರ ಠಾಣೆ ಪಿಎಸ್ಐ ಅವರು ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಾರೆ. ಪಿಎಸ್ಐ ನೇಮಕಾತಿ ಹಗರಣ ಪ್ರಕರಣದ ತನಿಖೆಯಲ್ಲಿ ಇವರನ್ನು ತನಿಖೆ ಮಾಡಬೇಕು ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಒತ್ತಾಯಿಸಿದರು.
ಅಶ್ವಿನಿ ಅನಂತಪುರ ಅವರು ಈ ಸಂಬಂಧ ಮಾತನಾಡಿರುವ ಆಡಿಯೋ ಬಿಡುಗಡೆ ಮಾಡಿ, ಇದರ ಹಿಂದೆ ಯಾವ ರಾಜಕಾರಣಿಗಳ ಕೈವಾಡವಿದೆ ಎಂಬುದನ್ನು ತನಿಖೆ ನಡೆಸಲಿ ಎಂದು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಎನ್.ಆರ್.ಸಂಚಾರ ಠಾಣೆ ಪಿಎಸ್ಐ ಅವರೊಂದಿಗೆ ಪಿಎಸ್ಐ ಆಕಾಂಕ್ಷಿಯೊಬ್ಬರು ಮಾತನಾಡಿರುವ ಮೊಬೈಲ್ ಸಂಭಾಷಣೆಯ ಆಡಿಯೋ ಬಿಡುಗಡೆ ಮಾಡಿದರು. ಪಿಎಸ್ಐ ಹುದ್ದೆ ಸೇರಿದಂತೆ ಕೆಎಂಎಫ್, ಬೆಸ್ಕಾಂ, ಚೆಸ್ಕಾಂ, ಕೆಪಿಎಸ್ಸಿ ಹುದ್ದೆಗಳಿಗೆ ಲಂಚದ ಮೊತ್ತದ ಬಗ್ಗೆ ಚರ್ಚೆ ನಡೆಸಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ ಎಂದರು.
ಇದರೊಂದಿಗೆ ಪಿಎಸ್ಐ ಆಕಾಂಕ್ಷಿಯು0 ವ್ಯಕ್ತಿಯೊಬ್ಬರಿಗೆ 10 ಬಾರಿ ಆರ್ಟಿಜಿಎಸ್ ಮೂಲಕ ಲಂಚದ ಹಣ ಸಂದಾಯ ಮಾಡಿರುವ ಆದಾಯ ಪ್ರತಿಯನ್ನು ಲಕ್ಷಣ್ ಪ್ರದರ್ಶಿಸಿದರು. ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಪರಮಾವಧಿ ತಲುಪಿದೆ. ಕಳೆದ ಮೂರು ವರ್ಷಗಳಿಂದ ಎಲ್ಲ ಇಲಾಖೆಗಳ ನೇಮಕಾತಿಯಲ್ಲಿ ಕೋಟ್ಯಂತರ ಹಣವನ್ನು ಆಯ್ಕೆಯಾದ ಅಭ್ಯರ್ಥಿಗಳಿಂದ ಸಂಗ್ರಹಿಸಲಾಗಿದೆ.
ಇದನ್ನೂ ಓದಿ: ಸಿದ್ದರಾಮಯ್ಯರ ಮುಂದೆ ಸಿ.ಟಿ ರವಿ ಇನ್ನೂ ಬಚ್ಚಾ: ಶಾಸಕ ರಾಘವೇಂದ್ರ ಹಿಟ್ನಾಳ್
ಎಲ್ಲರೂ ಕೂಡ ಲಂಚ ಕೊಟ್ಟು ಬಂದಿದ್ದಾರೆ. ಈಗಾಗಲೇ ಸಚಿವರಾದ 8 ಸಚಿವರು ಪಿಎಸ್ಐ ಹಗರಣದಲ್ಲಿ ಭಾಗಿಯಾಗಿದ್ದು, ಸರ್ಕಾರ ಇದನ್ನು ಮುಚ್ಚಿ ಹಾಕುವ ಪ್ರಯತ್ನದಲ್ಲಿದೆ. ಸಚಿವ ಅಶ್ವತ್ಥ ನಾರಾಯಣ ತಲಾ 80 ಲಕ್ಷ ರೂ.ಲಂಚ ಪಡೆದಿದ್ದಾರೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಆದರೂ ಇದನ್ನು ತನಿಖೆ ನಡೆಸದೇ ಮುಚ್ಚಿ ಹಾಕಿದೆ. ಇದರ ಬಗ್ಗೆ ಸಂಪೂರ್ಣವಾಗಿ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಸಿದ್ದರಾಮಯ್ಯ ಅವರಿಗೆ ಅವಾಚ್ಯ ಪದ ಬಳಕೆ ಮಾಡಿದ್ದಾರೆ. ಸಿ.ಟಿ.ರವಿಗೆ ಮಾನಮರ್ಯಾದೆ ಇದ್ದರೆ 8 ಮಂತ್ರಿ, 9 ಶಾಸಕರ ಸಿ.ಡಿ.ಬಿಡುಗಡೆ ಸಂಬಂಧ ನ್ಯಾಯಾಲಯದಿಂದ ತಂದಿರುವ ತಡೆಯಾಜ್ಞೆಯನ್ನು ತೆರವುಗೊಳಿಸಲಿ ಎಂದು ಸವಾಲು ಹಾಕಿದರು.