ಮೈಸೂರು: ಬಿಇಎಂಎಲ್ ಖಾಸಗೀಕರಣಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ನಿಲುವನ್ನು ಖಂಡಿಸಿ ಭಾರತ್ ಅರ್ಥ್ ಮೂವರ್ಸ್ ಎಂಪ್ಲಾಯಿಸ್ ಅಸೋಸಿಯೇಷನ್ನಿಂದ ಪ್ರತಿಭಟನೆ ನಡೆಸಲಾಯಿತು.
ಏಷ್ಯದಲ್ಲಿಯೇ ಅತೀ ದೊಡ್ಡದಾದ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವನ್ನು ಹೊಂದಿರುವ ಬಿಇಎಂಎಲ್ ಸಂಸ್ಥೆ ವಾರ್ಷಿಕವಾಗಿ 3,500 ಕೋಟಿಗಿಂತಲೂ ಮಿಗಿಲಾದ ವಹಿವಾಟನ್ನು ಮಾಡುತ್ತಿದ್ದು, ಸತತವಾಗಿ 1964ರಿಂದ 2019ರವರೆಗೆ ಲಾಭ ಗಳಿಸುತ್ತಿರುವ ಸಂಸ್ಥೆಯಾಗಿದೆ. ಆದರೆ, ಇಂತಹ ಬೃಹತ್ ರಕ್ಷಣಾ ವಲಯದ ಉದ್ಯಮದ ಶೇ. 54.03 ಷೇರಿನಲ್ಲಿ ಶೇ. 26ರಷ್ಟು ಷೇರುಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ತೀರ್ಮಾನವನ್ನು ಕೇಂದ್ರ ಸಚಿವ ಸಂಪುಟ ತೆಗೆದುಕೊಂಡಿರುತ್ತದೆ. ಇದರಿಂದ 8,500 ಕಾಯಂ ಉದ್ಯೋಗಿಗಳು ಹಾಗೂ 4,500 ಗುತ್ತಿಗೆ ಕಾರ್ಮಿಕರಿಗೆ ಭವಿಷ್ಯದಲ್ಲಿ ಕೆಲಸದ ಅಭದ್ರತೆ ತಲೆದೋರಲಿದೆ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರ ಖಾಸಗಿ ಸಂಸ್ಥೆಗಳಿಗೆ ಷೇರುಗಳನ್ನು ನೀಡದೆ ಉದ್ಯೋಗಿಗಳ ಹಾಗೂ ಬೆಮಲ್ ಸಂಸ್ಥೆಯ ಹಿತದೃಷ್ಟಿ ನೋಡಬೇಕಿದೆ ಎಂದು ಆಗ್ರಹಿಸಿದರು.