ಮೈಸೂರು: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿಯಾದ ನಂತರ ರೈಲ್ವೆ ಇಲಾಖೆ ಮೇಲಾದ ಪರಿಣಾಮ, ಒಡಿಶಾ ರೈಲು ದುರಂತ ಹಿನ್ನೆಲೆಯಲ್ಲಿ ಮೈಸೂರು ವಿಭಾಗದಲ್ಲಿ ಕೈಗೊಂಡ ರೈಲ್ವೇ ಸುರಕ್ಷತಾ ಕ್ರಮಗಳು ಹಾಗೂ ಅಭಿವೃದ್ಧಿ ಕಾರ್ಯದ ಕುರಿತಾಗಿ ಮೈಸೂರು ವಿಭಾಗೀಯ ಡಿವಿಷನಲ್ ರೈಲ್ವೆ ಮ್ಯಾನೇಜರ್ ಶಿಲ್ಪಿ ಅಗರ್ವಾಲ್ ಅವರು ಈಟಿವಿ ಭಾರತ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದರು.
ಮೈಸೂರಿನಿಂದ ಬೆಂಗಳೂರಿಗೆ ಪ್ರತಿದಿನ 50 ರೈಲುಗಳು ಸಂಚಾರ ನಡೆಸುತ್ತವೆ. ಈ ರೈಲುಗಳಲ್ಲಿ ಅಂದಾಜು 70 ಸಾವಿರ ಜನರು ಪ್ರಯಾಣ ಮಾಡುತ್ತಾರೆ. ಮೈಸೂರು, ಮಂಡ್ಯ, ಮದ್ದೂರು ಸೇರಿದಂತೆ ಹಲವು ಪಟ್ಟಣಗಳಿಂದ ಸಾವಿರಾರು ಜನರು ಪ್ರತಿನಿತ್ಯ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಾರೆ. ಅದರಂತೆ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಶಕ್ತಿ ಯೋಜನೆಯಿಂದ ರೈಲು ಪ್ರಯಾಣದಲ್ಲಿ ಬದಲಾವಣೆ ಆಗಿಲ್ಲ : ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿ ಆದ ಬಳಿಕ ರೈಲಿನಲ್ಲಿ ಮಹಿಳೆಯರ ಕಡಿಮೆ ಆಗಿದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಏಕೆಂದರೆ ಕೆಲವರು ತಿಂಗಳ ಪಾಸ್ಗಳನ್ನು ಪಡೆದಿರುತ್ತಾರೆ. ಆದ್ದರಿಂದ ಈ ಬಗ್ಗೆ ಸದ್ಯಕ್ಕೆ ನಾವು ಏನನ್ನು ಹೇಳಲು ಆಗದು, ಅದಕ್ಕೆ ಕಾಲಾವಕಾಶ ಬೇಕು. ಜೊತೆಗೆ ರೈಲಿನಲ್ಲಿ ಪ್ರಯಾಣ ಮಾಡುವ ಹೆಣ್ಣು ಮಕ್ಕಳಿಗೆ ಮೂಲಭೂತ ಸೌಲಭ್ಯಗಳು ಇರುತ್ತವೆ. ಆದ್ದರಿಂದ ಸದ್ಯಕ್ಕೆ ರಿಸರ್ವೆಷನ್ನಲ್ಲಿ ಅಂತಹ ಬದಲಾವಣೆ ಕಂಡುಬಂದಿಲ್ಲ, ಮುಂದೆ ಏನಾಗಲಿದೆ ಎಂಬುದನ್ನು ಕಾದುನೋಡಬೇಕು ಎಂದು ಹೇಳಿದರು.
ಸುರಕ್ಷತಾ ಯೋಜನೆಗಳಿಗೆ ಕ್ರಮ: ಒಡಿಶಾ ರೈಲು ದುರಂತದಿಂದ ಎಚ್ಚೆತ್ತ ನಾವು ಮೈಸೂರು ವಿಭಾಗದಲ್ಲಿ ಕೆಲವು ಸುರಕ್ಷತಾ ಯೋಜನೆಗಳನ್ನು ರೂಪಿಸಿದ್ದೇವೆ. ಎಲ್ಲ ಅಫೀಸರ್‌ಗಳಿಗೂ ಒಂದೊಂದು ಷೆಡ್ಯೂಲ್ ಎಂದು ಟೈಮ್ ಟೇಬಲ್ ಕೊಟ್ಟಿದ್ದೇವೆ. ಎಲ್ಲ ಸ್ಟೇಷನ್‌ಗಳಿಗೂ ಅಧಿಕಾರಿಗಳು ತಪ್ಪದೇ ವಾರದಲ್ಲಿ ಮೂರರಿಂದ ನಾಲ್ಕು ದಿನ ವಿಸಿಟ್ ಮಾಡುವಂತೆ ಸೂಚಿಸಿದ್ದೇವೆ. ಸಕಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.
ಗುಣಮಟ್ಟದ ರೈಲ್ವೆ ಸ್ಟೇಷನ್: ಪಾರಂಪರಿಕ ಹಾಗೂ ದೇಶದ ಮೂರನೇ ಉತ್ತಮ ಗುಣಮಟ್ಟದ ರೈಲ್ವೆ ಸ್ಟೇಷನ್ ಆಗಿರುವ ಮೈಸೂರು ರೈಲ್ವೆ ನಿಲ್ದಾಣದ ಪಾರಂಪರಿಕತೆ ಉಳಿಸಿಕೊಂಡು, ಉತ್ತಮ ದರ್ಜೆಯ ರೈಲ್ವೆ ನಿಲ್ದಾಣವನ್ನಾಗಿ ಮಾಡಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಯಾಣಿಕರ ಸುರಕ್ಷತೆ, ಸಮರ್ಪಕ ಸೌಕರ್ಯಗಳನ್ನು ಒದಗಿಸುವಲ್ಲಿ ರೈಲ್ವೆ ಇಲಾಖೆ ಸುಸಜ್ಜಿತವಾಗಿದೆ ಎಂದು ಹೇಳಿದರು.
ಇದನ್ನೂಓದಿ: Annabhagya: ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊರತೆ: ಅಕ್ಕಿ ಬದಲು ಹಣ ಪಾವತಿಸಲು ಸರ್ಕಾರ ನಿರ್ಧಾರ