ಮೈಸೂರು: ಲವ್ ಜಿಹಾದ್ ನಿಯಂತ್ರಣಕ್ಕೆ ಪ್ರತ್ಯೇಕ ಕಾಯ್ದೆ ರೂಪಿಸಬೇಕು. ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗೆ ವಿಶೇಷವಾಗಿ ಮನವಿ ಮಾಡುತ್ತಿದ್ದೇನೆ ಎಂದು ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ನಗರಕ್ಕಿಂದು ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಲವ್ ಜಿಹಾದ್ ದಿನೇ ದಿನೇ ಹೆಚ್ಚಾಗುತ್ತಿದೆ. ಇದರ ಬಗ್ಗೆ ಸರ್ಕಾರ ಚಿಂತನೆ ಮಾಡಬೇಕಿದೆ. ಲವ್ ಜಿಹಾದ್ ವಿರುದ್ಧ ಮೊದಲು ಧ್ವನಿ ಎತ್ತಿದವನೇ ನಾನು. 3 ಸಾವಿರ ಹೆಣ್ಣು ಮಕ್ಕಳನ್ನು ಲವ್ ಜಿಹಾದ್ನಿಂದ ನಾವು ಪಾರು ಮಾಡಿದ್ದೇವೆ ಎಂದರು.
ಹಿಂದೂ ಹೆಣ್ಣು ಮಕ್ಕಳು ಪ್ರೀತಿ ಮಾಡಬೇಕಾದರೆ, ಅಬ್ದುಲ್ಲಾ-ಅಶೋಕ್ ವ್ಯತ್ಯಾಸ ಅರಿತು ಪ್ರೀತಿ ಮಾಡಬೇಕು. ಇಲ್ಲವಾದರೆ ದೆಹಲಿಯಲ್ಲಿ ನಡೆದಂತೆ ಹಿಂದೂ ಹೆಣ್ಣು ಮಕ್ಕಳು ತುಂಡು ತುಂಡಾಗಿ ಬಲಿಯಾಗುತ್ತಾರೆ. ನಿಮ್ಮ ಜತೆಗೆ ಹಿಂದೂ ಧರ್ಮವನ್ನೂ ಬಲಿ ಕೊಡಬೇಡಿ. ಲವ್ ಜಿಹಾದ್ ನಿಯಂತ್ರಣವಾಗಬೇಕಾದರೆ ಪ್ರತ್ಯೇಕ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.
ಚುನಾವಣೆಗಾಗಿ ಬಿಜೆಪಿಗೆ ಬೈಯುತ್ತಿಲ್ಲ: ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗಲಿದೆ ಎಂದು ಬೈಯುತ್ತಿಲ್ಲ. ನಾನು ಎಂದೂ ಬಿಜೆಪಿ ಪರವಾಗಿ ಮಾತನಾಡಿಲ್ಲ. ಬಿಜೆಪಿ ಪರವಾಗಿ ಸಾಫ್ಟ್ ಕಾರ್ನರ್ ತೋರಿಲ್ಲ. ಸಿದ್ದರಾಮಯ್ಯ ಅವರಿಗಿಂತ ಹೆಚ್ಚು ಬೈದವನು ನಾನು. ಬಿಜೆಪಿಯನ್ನು ಮೊದಲಿನಿಂದಲೂ ಟೀಕಿಸುತ್ತ ಬಂದಿದ್ದೇನೆ. ಕೇವಲ ಹಿಂದುತ್ವದ ವಿಚಾರವಾಗಿ ಗಟ್ಟಿ ಧ್ವನಿಯಲ್ಲಿ ಮಾತಾಡುತ್ತಿದ್ದೀನಿ ಎಂದು ಸ್ಪಷ್ಟಪಡಿಸಿದರು.
ಮೈಸೂರು ಉಗ್ರರ ಪಾಲಿಗೆ ಸ್ಲೀಪಿಂಗ್ ಸೆಲ್ ಆಗುತ್ತಿದೆ. ಮೈಸೂರಿನಲ್ಲಿ ಉಗ್ರರು ಸ್ವೇಚ್ಛೆಯಿಂದ ಓಡಾಡುವಂತಾಗಿದೆ. ಉಗ್ರರ ಈ ಬಗೆಯ ಚಟುವಟಿಕೆ ವ್ಯಾಪಕವಾಗುತ್ತಿದೆ. ಮೈಸೂರಿನಲ್ಲಿ ಭಯೋತ್ಪಾದನಾ ನಿಗ್ರಹ ದಳದ ಘಟಕ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ಎನ್.ಆರ್. ಕ್ಷೇತ್ರದಲ್ಲಿ ಕೂಂಬಿಂಗ್ ಆಪರೇಷನ್ ಆಗಬೇಕೆಂಬ ಸಂಸದ ಪ್ರತಾಪಸಿಂಹ ಹೇಳಿಕೆ ವಿಚಾರವಾಗಿ ಮಾತನಾಡಿ, ಪ್ರತಾಪಸಿಂಹ ಹೇಳಿಕೆಯನ್ನು ಬೆಂಬಲಿಸುತ್ತೇನೆ ಎಂದರು.
ಭಯೋತ್ಪಾದನೆ ಮಟ್ಟ ಹಾಕಬೇಕು: ಮಂಗಳೂರಲ್ಲು ಬಾಂಬ್ ಬ್ಲಾಸ್ಟ್ ಮಾಡಿದ ಶಾರಿಕ್ ಹಿಂದೂ ವೇಷ ಧರಿಸಿದ ವಿಚಾರವಾಗಿ ಮಾತನಾಡಿ, ಉಗ್ರಗಾಮಿಗಳು ತಾವು ಮಾಡುವ ಕೃತ್ಯಗಳನ್ನು ಹಿಂದೂಗಳ ಮೇಲೆ ಹಾಕಲು ಈ ಕುತಂತ್ರ ಮಾಡುತ್ತಿದ್ದಾರೆ. ಹಿಂದೂಗಳು ಯಾವತ್ತೂ ಭಯೋತ್ಪಾದನಾ ಚಟುವಟಿಕೆ ಮಾಡಲ್ಲ. ಭಾರತದಲ್ಲಿ ಮಾತ್ರ ಅಲ್ಲ, ಇಡೀ ವಿಶ್ವದಲ್ಲೇ ಜಗಜ್ಜಾಹೀರಾಗಿರೋದು ಇಸ್ಲಾಂ ಭಯೋತ್ಪಾದನೆ ಮಾತ್ರ. ಹಾಗಾಗಿ ಇಸ್ಲಾಮಿಕ್ ಭಯೋತ್ಪಾದನೆ ಮಟ್ಟ ಹಾಕಬೇಕು ಎಂದು ಹೇಳಿದರು.
ಇದನ್ನೂ ಓದಿ: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಘಟನಾ ಸ್ಥಳಕ್ಕೆ ಗೃಹ ಸಚಿವ, ಡಿಜಿಪಿ ಭೇಟಿ