ಮೈಸೂರು: ಐಸಿಯುನಲ್ಲಿದ್ದ ಹಸುಗೂಸು ಎತ್ತಿಕೊಂಡು ನರ್ಸ್ ಒಬ್ಬರು ಟಿಕ್ ಟಾಕ್ ಮಾದರಿಯಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಘಟನೆ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ನಡೆದಿದೆ.
ಚೆಲುವಾಂಬ ಆಸ್ಪತ್ರೆಯ ಐಸಿಯುನಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿ ಸೇವೆ ಸಲ್ಲಿಸುತ್ತಿರುವ ನರ್ಸ್ ಅಳುತ್ತಿರುವ ಎರಡ್ಮೂರು ದಿನದ ಹಸುಗೂಸನ್ನು ಎತ್ತಿಕೊಂಡು ಹಾಡೊಂದಕ್ಕೆ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸದ್ಯ ವಿಡಿಯೋ ವೈರಲ್ ಆಗಿದ್ದು, ನರ್ಸ್ ವರ್ತನೆಗೆ ಹಲವಾರು ಮಂದಿ ಕಿಡಿಕಾರಿದ್ದಾರೆ. ನರ್ಸ್ ಹಸುಗೂಸನ್ನು ಎತ್ತಿಕೊಂಡು ಈ ರೀತಿ ಮಾಡಿದರೆ ಮಗುವಿನ ಆರೋಗ್ಯದ ಮೇಲೆ ಏನಾದರೂ ಪರಿಣಾಮ ಬೀರಿದರೆ ಯಾರು ಕಾರಣ ಎಂಬ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಕುರಿತು ಚೆಲುವಾಂಬ ಆಸ್ಪತ್ರೆಯ ವೈದ್ಯಾಧಿಕಾರಿಗಳ ಗಮನಕ್ಕೆ ಬಂದಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಬೇಜವಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಲಾಗುವುದು ಎಂದು ಹೆಸರು ಹೇಳಲಿಚ್ಚಿಸದ ಮಹಿಳೆಯೊಬ್ಬರು ತಿಳಿಸಿದ್ದಾರೆ.