ಮೈಸೂರು: ಸತತ ಒಂದೂವರೆ ತಿಂಗಳಿನಿಂದ ಹಿರಿಯ ಆನೆಗಳೊಂದಿಗೆ ತಾಲೀಮು ನಡೆಸಿ, ಇದೀಗ ಜಂಬೂಸವಾರಿ ಮೆರವಣಿಗೆಯಲ್ಲಿ ಹೊಸ ಆನೆಗಳನ್ನು ಕೈಬಿಟ್ಟಿರುವುದಕ್ಕೆ ಮಾವುತರು, ಕಾವಾಡಿಗರು ಬೇಸರ ಹೊರಹಾಕಿದರು. ಮೆರವಣಿಗೆಯಲ್ಲಿ ನಾವೂ ಹೋಗುತ್ತೇವೆ ಎಂದು ಭಾವಿಸಿದ್ದ ಹೊಸ ಆನೆಗಳ ಮಾವುತರು ಹಾಗೂ ಕಾವಾಡಿಗರು, ಜನಸಂದಣಿಗೆ ಆನೆಗಳು ಬೆಚ್ಚುವ ಕಾರಣಕ್ಕೆ ಅರಣ್ಯಾಧಿಕಾರಿಗಳು ತೆಗೆದುಕೊಂಡ ನಿರ್ಧಾರಕ್ಕೆ ನಿರಾಶೆ ವ್ಯಕ್ತಪಡಿಸಿದ್ದಾರೆ.
ಗಜಪಡೆಯೊಂದಿಗೆ ಆಗಮಿಸಿರುವ ರೋಹಿತ್, ಕಂಜನ್, ಸುಗ್ರೀವ, ಹಿರಣ್ಯ, ಲಕ್ಷ್ಮಿ ಆನೆಗಳು ಇದೇ ಮೊದಲ ಬಾರಿಗೆ ಮಹೋತ್ಸವದಲ್ಲಿ ಪಾಲ್ಗೊಂಡು, ತಾಲೀಮಿನಲ್ಲಿ ಹಿರಿಯ ಆನೆಗಳೊಂದಿಗೆ ಗಂಭೀರವಾಗಿ ಹೆಜ್ಜೆ ಹಾಕಿವೆ. ಒಂದೂವರೆ ತಿಂಗಳು ನಡೆದ ತಾಲೀಮಿನಲ್ಲಿ ಹೊಸ ಆನೆಗಳಾದರೂ, ಜನಸಂದಣಿಗೆ ಬೆಚ್ಚದೆ ಪಾಲ್ಗೊಂಡು ಸೈ ಎನ್ನಿಸಿಕೊಂಡಿದ್ದವು. ಕುಶಾಲತೋಪು ತಾಲೀಮಿನಲ್ಲಿ ಹೊಸ ಆನೆಗಳು ಸ್ವಲ್ಪ ಬೆಚ್ಚಿದ್ದವು.
ಇಷ್ಟು ದಿನಗಳು ನಿರಂತರವಾಗಿ ತಾಲೀಮು ನಡೆಸಿ, ನಾವೂ ಜಂಬೂಸವಾರಿಯಲ್ಲಿ ಆನೆಗಳೊಂದಿಗೆ ಹೋಗುತ್ತೇವೆ ಎಂಬ ವಿಶ್ವಾಸವಿತ್ತು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಕೈಬಿಟ್ಟಿದ್ದಾರೆ. ಒಂದೆಡೆ ಬೇಸರವೂ, ಮತ್ತೊಂದೆಡೆ ಸಂತೋಷವೂ ಆಗಿದೆ ಎನ್ನುತ್ತಾರೆ ಹೆಸರು ಹೇಳದ ಮಾವುತರು ಹಾಗೂ ಕಾವಾಡಿಗಳು.
ನಮ್ಮ ಆನೆಗಳು ಮೆರವಣಿಗೆಯಲ್ಲಿ ಹೋಗಿದ್ದವು. ಲಕ್ಷಾಂತರ ಜನರ ಮಧ್ಯೆ ಹೋಗುತ್ತಿದ್ದಾಗ ಖುಷಿಯಾಗುತ್ತಿತ್ತು. ಒಂದು ವೇಳೆ ಜನರ ಕೂಗಾಟ ಕೇಳಿ ರಂಪಾಟ ಮಾಡಿದ್ದರೆ, ನಮಗೆ ಕೆಟ್ಟ ಹೆಸರು ಬರುತ್ತಿತ್ತು. ಹೋಗಲಿ ಬಿಡಿ, ಮುಂದಿನ ವರ್ಷ ನಾವು ದಸರಾಗೆ ಬಂದರೆ ಹೋಗುತ್ತೇವೆ ಎನ್ನುತ್ತಾರೆ ಕೆಲವು ಮಾವುತರು ಹಾಗೂ ಕಾವಾಡಿಗಳು.
ರೋಹಿತ್ ಆನೆಗೆ ಆರೈಕೆ: ಬಂಡೀಪುರ ರಾಂಪುರ ಶಿಬಿರದಿಂದ ಬಂದಿರುವ ರೋಹಿತ್ ಆನೆ 10 ವರ್ಷಗಳ ರಾಜವಂಶಸ್ಥರ ಆಶ್ರಯದಲ್ಲಿಯೇ ಬೆಳೆದಿದ್ದರಿಂದ ಆತನ ಮೇಲೆ ರಾಜವಂಶಸ್ಥರಿಗೆ ಎಲ್ಲಿಲ್ಲದ ಪ್ರೀತಿ. ವಿಶಾಲಾಕ್ಷಿದೇವಿ ಪುತ್ರಿಯಾದ ಶೃತಿಕೀರ್ತಿದೇವಿ ಅವರು, ರೋಹಿತ್ ಅರಮನೆಗೆ ಬಂದಾಗಿನಿಂದ, ಪ್ರತಿನಿತ್ಯ ಅದರ ಯೋಗಕ್ಷೇಮ ವಿಚಾರಿಸಿ, ಆತನ ನೆಚ್ಚಿನ ತಿಂಡಿಯನ್ನು ಕೊಟ್ಟು ಹೋಗುತ್ತಿದ್ದಾರೆ. ಗಜಪಡೆಯೊಂದಿಗೆ ವಾಪಸ್ ಅರಮನೆಯಿಂದ ಆನೆ ಶಿಬಿರಕ್ಕೆ ಹೋಗುವವರೆಗೂ ವಿಶೇಷ ಆರೈಕೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ದರ್ಗಾಕ್ಕೆ ತೆರಳಿ ಆಶೀರ್ವಾದ ಪಡೆದ ಜಂಬೂಸವಾರಿ ಗಜಪಡೆಗಳು : ವಿಡಿಯೋ...