ಮೈಸೂರು : ಹೊಸ ವರ್ಷದ ಆಚರಣೆಗೆ ರಾತ್ರಿ ಒಂದು ಗಂಟೆವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೊತ್ ತಿಳಿಸಿದ್ದಾರೆ.
ನಗರ ಪೊಲೀಸ್ ಆಯುಕ್ತರ ಕಛೇರಿಯಲ್ಲಿ ಈ ವರ್ಷದ ಕೊನೆಯ ದಿನ ಪೊಲೀಸ್ ಪ್ರಾಪರ್ಟಿ ಪೆರೇಡ್ ನಡೆಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರು ನಗರದಲ್ಲಿ ಹೊಸ ವರ್ಷ ಆಚರಣೆಗೆ ರಾತ್ರಿ ಒಂದು ಗಂಟೆಯ ವರೆಗೆ ಅವಕಾಶ ಕಲ್ಪಿಸಲಾಗಿದೆ. ಬಳಿಕ ನಗರದ ಎಲ್ಲಾ ಭಾಗಗಳಲ್ಲೂ ಡ್ರಿಂಕ್ ಅಂಡ್ ಡ್ರೈವ್ ಟೆಸ್ಟ್ ಮಾಡಲಾಗುವುದು ಎಂದು ತಿಳಿಸಿದರು.
ಮಧ್ಯರಾತ್ರಿ 12.15 ರವರೆಗೆ ಹೋಟೆಲ್ ನಿಂದ ಪಾರ್ಸಲ್ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗಿದೆ. ಹೋಟೆಲ್, ಕ್ಲಬ್, ಅಪಾರ್ಟ್ ಮೆಂಟ್ ಒಳಗೆ ಸಾರ್ವಜನಿಕರಿಗೆ ತೊಂದರೆ ಅಗದ ರೀತಿಯಲ್ಲಿ ಹೊಸ ವರ್ಷದ ಆಚರಣೆ ಮಾಡಬಹುದು. ನಗರದ ಹೊರವಲಯದ ವೃತ್ತಗಳಲ್ಲಿ ಜನ ಸೇರಿ ಹೊಸ ವರ್ಷ ಆಚರಣೆ ಮಾಡಲು ನಿಷೇಧ ಹೇರಲಾಗಿದೆ ಎಂದು ಇದೇ ವೇಳೆ ತಿಳಿಸಿದರು.
ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರಿಗೆ ನಿಷೇಧ : ಹೊಸ ವರ್ಷ ಆಚರಣೆಗೆ ಚಾಮುಂಡಿ ಬೆಟ್ಟಕ್ಕೆ ಯಾರು ಹೋಗದಂತೆ 31/12/2022 ರಾತ್ರಿ 9ಗಂಟೆಯಿಂದ 1/1/2023 ಬೆಳಗ್ಗೆ 5 ಗಂಟೆ ವರೆಗೆ ಚಾಮುಂಡಿ ಬೆಟ್ಟದ ನಿವಾಸಿಗಳನ್ನು ಹೊರತುಪಡಿಸಿ ಸಾರ್ವಜನಿಕರಿಗೆ ಹಾಗೂ ಇತರರ ವಾಹನ ಹಾಗೂ ವ್ಯಕ್ತಿಗಳಿಗೆ ಚಾಮುಂಡಿ ಬೆಟ್ಟಕ್ಕೆ ನಿಷೇಧ ಹೇರಲಾಗಿದೆ.
ಅರಮನೆಯಲ್ಲಿ ವಿಶಿಷ್ಟ ಕಾರ್ಯಕ್ರಮಗಳು : ಹೊಸ ವರ್ಷ ಹಿನ್ನೆಲೆ ಮೈಸೂರು ಅರಮನೆ ಆಡಳಿತ ಮಂಡಳಿಯವರು ಅಂಬಾ ವಿಲಾಸ ಅರಮನೆಯ ಮುಂಭಾಗದಲ್ಲಿ ಇಂದು ರಾತ್ರಿ 11 ಗಂಟೆಯಿಂದ 12 ಗಂಟೆಯವರೆಗೆ ಪೊಲೀಸ್ ಬ್ಯಾಂಡ್ ಹಾಗೂ ರಾತ್ರಿ 12 ಗಂಟೆಯಿಂದ 12:15 ನಿಮಿಷದವರೆಗೆ ಹೊಸ ವರ್ಷ ಆಚರಣೆಯ ಪ್ರಯುಕ್ತ ಶಬ್ದ ರಹಿತ ಪರಿಸರ ಸ್ನೇಹಿ ಪಟಾಕಿಗಳನ್ನು ಸಿಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
2022ನೇ ಸಾಲಿನಲ್ಲಿ 320 ಕಳವು ಪ್ರಕರಣಗಳು ಪತ್ತೆ: 2022 ಸಾಲಿನಲ್ಲಿ ಒಟ್ಟು 753 ಕಳವು ಪ್ರಕರಣಗಳು ಮೈಸೂರು ನಗರದ ವ್ಯಾಪ್ತಿಯಲ್ಲಿ ದಾಖಲಾಗಿವೆ. ಇದರಲ್ಲಿ 320 ಪ್ರಕರಣಗಳನ್ನು ಭೇದಿಸಲಾಗಿದ್ದು, ಒಟ್ಟು 346 ಆರೋಪಿಗಳನ್ನ ಬಂಧಿಸಲಾಗಿದೆ. 320 ಪತ್ತೆಯಾದ ಪ್ರಕರಣಗಳಲ್ಲಿ 3ಕೋಟಿ 55ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ಕಾರು, ದ್ವಿಚಕ್ರ ವಾಹನಗಳು, ಮೊಬೈಲ್, ಲ್ಯಾಪ್ ಟಾಪ್ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳನ್ನು ವಾರಸುದಾರರಿಗೆ ವಿತರಿಸಲಾಯಿತು.
ಇದನ್ನೂ ಓದಿ : ಪಾರ್ಟಿ ಪ್ರಿಯರ ನೆಚ್ಚಿನ ತಾಣಗಳಾದ ಕೋರಮಂಗಲ, ಎಚ್ಎಸ್ಆರ್ ಲೇಔಟ್ ಭಾಗದಲ್ಲಿ ಹೇಗಿದೆ ಭದ್ರತೆ?