ಮೈಸೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ 'ಗಂದಧ ಗುಡಿ' ಚಲನಚಿತ್ರದ ಬಿಡುಗಡೆ ಹಾಗೂ ದಲಿತ ಪ್ಯಾಂಥರ್ಸ್ ಮೂವ್ಮೆಂಟ್ ಸಂಘಟನೆ ಆರಂಭಗೊಂಡ ಸ್ಮರಣಾರ್ಥ ಶಾಸಕ ಬಿ ಹರ್ಷವರ್ಧನ್ ಅವರು ನಂಜನಗೂಡಿನ ಜನತೆಯ ಹೆಸರಿನಲ್ಲಿ ಮೈಸೂರು ಮೃಗಾಲಯದ ಕರಿಚಿರತೆ ದತ್ತು ಪಡೆದಿದ್ದಾರೆ.
ಈ ವರ್ಷದ ಅ. 28ರಿಂದ 2023ರ ಅಕ್ಟೋಬರ್ 27ರವರೆಗೆ ಕರಿ ಚಿರತೆ ದತ್ತು ಪಡೆದಿರುವ ಅವರು, ಈ ಸಂಬಂಧ ಮೃಗಾಲಯದ ಪ್ರಾಧಿಕಾರಕ್ಕೆ 50 ಸಾವಿರ ರೂ.ಗಳ ಚೆಕ್ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಶಾಸಕ ಬಿ ಹರ್ಷವರ್ಧನ್, ಪುನೀತ್ ರಾಜಕುಮಾರ್ ಅವರು ಕನ್ನಡ ನಾಡು, ನುಡಿಯ ಹಿರಿಮೆ ಸಾರುವ ಜೊತೆಗೆ ಪರಿಸರ ಪ್ರೇಮಿಯಾಗಿ ಅಮೂಲ್ಯ ವನ್ಯಜೀವಿ ಹಾಗೂ ಪ್ರಕೃತಿ ಸಂಪತ್ತಿನ ಸಂರಕ್ಷಣೆ ಬಗ್ಗೆ ಅಪಾರ ಕಾಳಜಿ ತೋರಿದ್ದರು ಎಂದಿದ್ದಾರೆ.

ಅಪ್ಪು ಅಭಿನಯಿಸಿರುವ ಕೊನೆಯ ಚಿತ್ರ ಗಂದಧಗುಡಿ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಅದೇ ರೀತಿ 70ರ ದಶಕದಲ್ಲಿ ಮಹಾರಾಷ್ಟ್ರದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳಿಂದ ಪ್ರೇರಿತರಾಗಿದ್ದ ಯುವಕರು ದಲಿತ ಪ್ಯಾಂಥರ್ಸ್ ಮೂವ್ಮೆಂಟ್ (ಡಿಪಿಎಂ) ಆರಂಭಿಸಿ, ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧ ಪ್ರತಿರೋಧ ತೋರಿದ್ದರು. ಈ ಸಂಘಟನೆಯ ಚಿಹ್ನೆ ಕೂಡ ಕರಿ ಚಿರತೆಯಾಗಿತ್ತು. ಇದರ ಸ್ಮರಣಾರ್ಥ ಮೈಸೂರು ಮೃಗಾಲಯದಲ್ಲಿ ಕರಿಚಿರತೆಯನ್ನು ನಂಜನಗೂಡು ವಿಧಾನಸಭಾ ಕ್ಷೇತ್ರದ ಜನರ ಹೆಸರಿನಲ್ಲಿ ದತ್ತು ಸ್ವೀಕರಿಸಿದ್ದೇನೆ ಎಂದು ಹರ್ಷವರ್ಧನ್ ತಿಳಿಸಿದ್ದಾರೆ.
ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್ ಅಗಲಿಕೆಗಿಂದು ಒಂದು ವರ್ಷ: ಆ ಕರಾಳ ದಿನ ಆಗಿದ್ದೇನು?