ಮೈಸೂರು: ರೈತರಿಂದ ಟ್ರ್ಯಾಕ್ಟರ್ಗಳನ್ನು ಬಾಡಿಗೆ ಪಡೆದುಕೊಂಡು, ಅವುಗಳನ್ನು ಖಾಸಗಿ ವ್ಯಕ್ತಿಗಳಿಗೆ ಗಿರವಿ ಇಟ್ಟು ಪರಾರಿಯಾಗುತ್ತಿದ್ದ ವ್ಯಕ್ತಿಯನ್ನು ಹುಣಸೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯ ವಿಚಾರಣೆಯಿಂದ ಈ ತರಹದ ಪ್ರಕರಣ ಬೆಳಕಿಗೆ ಬಂದಿದೆ. ಹುಣಸೂರು ತಾಲೂಕಿನ ಹನಗೂಡು ಹೊಬಳಿಯ ಗಾಣನಕಟ್ಟೆ ನಂದೀಶ್ ರೈತರಿಂದ ಬಾಡಿಗೆಯ ನೆಪದಲ್ಲಿ ಟ್ರ್ಯಾಕ್ಟರ್ಗಳನ್ನು ಪಡೆದು ಬಳಿಕ ಖಾಸಗಿ ವ್ಯಕ್ತಿಗಳಿಗೆ ಹೆಚ್ಚಿನ ಹಣಕ್ಕೆ ಗಿರವಿ ಇಟ್ಟು ಪರಾರಿಯಾಗುತ್ತಿದ್ದನು.
ಫೈನಾನ್ಸ್ ಕಂಪನಿಯವರು ಮನೆಗೆ ಬಂದಾಗ ಮೋಸದ ವಿಷಯ ಬಯಲು: ಹೀಗೆ ಹಲವು ರೈತರ ಬಳಿ ಟ್ರ್ಯಾಕ್ಟರ್ಗಳನ್ನು ಬಾಡಿಗೆ ಕೊಡುವ ನೆಪದಲ್ಲಿ ಪಡೆದುಕೊಂಡು ಬೇರೆಯವರ ಬಳಿ ಒತ್ತೆ ಇಡುತ್ತಿದ್ದ ನಂದೀಶ್, ಎನ್.ಎಸ್.ತಿಟ್ಟು ಬಡಾವಣೆಯ ರಾಮು ಎಂಬುವವರು ಶೋರೂಮ್ನಿಂದ ಟ್ರ್ಯಾಕ್ಟರ್ ಖರೀದಿಸಿದ್ದರು. ಮಾಸಿಕ ಕಂತು ಕಟ್ಟಲಾಗದೇ ಪರಾದಾಡುತ್ತಿದ್ದರು. ಈ ವೇಳೆ, ಬಂದ ನಂದೀಶ್ ಟ್ರ್ಯಾಕ್ಟರ್ ಬಾಡಿಗೆ ನೀಡುವಂತೆ ಕೇಳಿದ್ದ. ಮಾಸಿಕ ಕಂತನ್ನು ತಾನೆ ಕಟ್ಟಿಕೊಂಡು ಹೋಗುತ್ತೇನೆ ಎಂದು ಹೇಳಿ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಿದ್ದ. ಆದರೆ, ಕೆಲವಾರು ದಿನಗಳ ಬಳಿಕ ಮಾಸಿಕ ಕಂತು ಕಟ್ಟಿಲ್ಲ ಎಂದು ಫೈನಾನ್ಸ್ ಕಂಪನಿಯವರು ಮನೆಗೆ ಬಂದಾಗ ರಾಮುಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ತಕ್ಷಣ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ನಂದೀಶ್ ಪತ್ತೆಗಾಗಿ ಹೋದಾಗ ಈ ತರಹದ ಹಲವಾರು ಜನರು ಮೋಸಕ್ಕೆ ಬಲಿಯಾಗಿರುವುದು ತಿಳಿದಿದೆ. ಆರೋಪಿ ನಂದೀಶ್ನನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಮಾಹಿತಿ ಹೊರಬಂದಿದೆ. ರೈತ ರಾಮುಗೆ ಮಾತ್ರವಲ್ಲದೇ, ಪೆಂಜಹಳ್ಳಿ ಗ್ರಾಮದ ರತ್ನಮ್ಮ, ಕೊತ್ತೆಗಾಲದ ರವಿ ಸೇರಿದಂತೆ ಹಲವು ರೈತರ ಬಳಿ ಹೀಗೆ ಟ್ರ್ಯಾಕ್ಟರ್ಗಳನ್ನು ಬಾಡಿಗೆ ಪಡೆದು ಖಾಸಗಿ ವ್ಯಕ್ತಿಗಳಿಗೆ ಗಿರವಿ ಇಟ್ಟು ಪರಾರಿಯಾಗುತ್ತಿದ್ದ ಎಂಬ ವಿಷಯ ಪೊಲೀಸರಿಗೆ ತಿಳಿದಿದೆ.
ಪೊಲೀಸರು, ಆರೋಪಿ ನಂದೀಶ್ ಗಿರವಿ ಇಟ್ಟ ಟ್ರ್ಯಾಕ್ಟರ್ಗಳನ್ನು ವಶಪಡಿಸಿಕೊಂಡಿದ್ದು, ಅವುಗಳಲ್ಲಿ ನಾಲ್ವು ಟ್ರ್ಯಾಕ್ಟರ್ಗಳಿಗೆ ಮಾತ್ರ ದಾಖಲಾತಿ ಇದೆ. ನಾಲ್ಕು ಜನರಿಂದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಉಳಿದ ಟ್ರ್ಯಾಕ್ಟರ್ಗಳು ದಾಖಲಾತಿ ಇಲ್ಲದೇ ನೋಂದಣಿ ಸಹ ಆಗದೇ ಇರುವುದರಿಂದ ಅವುಗಳನ್ನು ಪೊಲೀಸ್ ಠಾಣೆಯು ಮುಂದೆಯೇ ನಿಲ್ಲಿಸಲಾಗಿದೆ.
ಮನೆ ಹತ್ತಿರ ಗಾಂಜಾ ಬೆಳೆದಿದ್ದ ಆರೋಪಿ ಅರೆಸ್ಟ್: ಮನೆಯ ಆವರಣದ ಹೂವಿನ ಗಿಡಗಳ ನಡುವೆ ಬೆಳೆದಿದ್ದ ಎರಡು ಗಾಂಜಾ ಗಿಡವನ್ನು ಪತ್ತೆಹಚ್ಚಿರುವ ಗ್ರಾಮಾಂತರ ಠಾಣೆ ಪೊಲೀಸರು ಸುಮಾರು 6 ಕೆಜಿಯ ಎರಡು ಗಾಂಜಾ ಗಿಡವನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ. ಹುಣಸೂರು ತಾಲೂಕಿನ ತಟ್ಟೆಕೆರೆ ಗ್ರಾಮದ ವಿಶ್ವನಾಥ್ ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ಡಿವೈಎಸ್‌ಪಿ ಮಹೇಶ್ ಹಾಗೂ ಇನ್ಸ್ಪೆಕ್ಟರ್ ರವಿ ಮಾರ್ಗದರ್ಶನದಲ್ಲಿ ಎಸ್.ಐ. ರಾಮಚಂದ್ರಪ್ಪ ನೇತೃತ್ವದಲ್ಲಿ ವಿಶ್ವನಾಥನ ಮನೆಯ ದಾಳಿ ನಡೆಸಲಾಗಿದೆ. ಆರೋಪಿ ವಿಶ್ವನಾಥನ ಮನೆ ಪಕ್ಕದಲ್ಲಿ ಹಾಗೂ ಮೇಲೆ ಹಿಂಭಾಗದಲ್ಲಿ ಗಾಂಜಾ ಗಿಡ ಬೆಳೆದಿರುವುದು ಪತ್ತೆಯಾಗಿದೆ. 5ರಿಂದ 6 ಅಡಿ ಎತ್ತರ ಬೆಳೆದಿರುವ ಹಸಿ ಗಾಂಜಾ ಗಿಡವನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: ಬ್ಯಾಗ್ನಲ್ಲಿ ಹೆಬ್ಬಾವು, ಕಾಂಗರೂ ಸೇರಿ ಕಾಡು ಪ್ರಾಣಿಗಳ ಕಳ್ಳಸಾಗಣೆ: ಕಸ್ಟಮ್ಸ್ನಿಂದ 234 ವನ್ಯಜೀವಿಗಳ ರಕ್ಷಣೆ