ಮೈಸೂರು: ಪತ್ನಿ ಮೇಲೆ ಅನುಮಾನಪಟ್ಟ ವ್ಯಕ್ತಿಯನ್ನು ಆತನ ಬಾಮೈದರು ಭೀಕರವಾಗಿ ಹತ್ಯೆ ಮಾಡಿ ಕೈ ಕತ್ತರಿಸಿಕೊಂಡು ಬಂದು ಪೊಲೀಸ್ ಠಾಣೆಗೆ ಶರಣಾದ ಘಟನೆ ನಗರದ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.
ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿ ನಗರದಲ್ಲಿ ಈ ಘಟನೆ ನಡೆದಿದೆ. ಮೊಹಮ್ಮದ್ ಸರಾನ್ (27) ಎಂಬಾತನನ್ನು ಆತನ ಇಬ್ಬರು ಬಾಮೈದರು (ಪತ್ನಿಯ ಸಹೋದರರು) ಹತ್ಯೆ ಮಾಡಿದ್ದಾರೆ.
ಘಟನೆಯ ವಿವರ:
ಮೈಸೂರಿನ ಗೌಸಿಯಾ ನಗರ ನಿವಾಸಿಯಾದ ಮೊಹಮ್ಮದ್ ಸರಾನ್ಗೆ ಕಳೆದ ಐದು ತಿಂಗಳ ಹಿಂದೆ ಶಾಂತಿನಗರದ ರುಬೀನಾ ಎಂಬಾಕೆಯ ಜೊತೆ ವಿವಾಹವಾಗಿತ್ತು. ಆರಂಭದಲ್ಲಿ ದಂಪತಿ ಚೆನ್ನಾಗಿಯೇ ಇದ್ದರು. ಈ ನಡುವೆ ಸರಾನ್ಗೆ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಸಿಕ್ಕಿದೆ. ಹಾಗಾಗಿ, ಪತ್ನಿ ಜೊತೆ ಬೆಂಗಳೂರಿಗೆ ಶಿಫ್ಟ್ ಆಗಲು ನಿರ್ಧರಿಸಿದ್ದ. ಆದರೆ, ಆತನ ಪತ್ನಿ ರುಬೀನಾ ಬೆಂಗಳೂರಿಗೆ ಹೋಗಲು ಒಪ್ಪುತ್ತಿರಲಿಲ್ಲ.
ದಿನ ಕಳೆದಂತೆ ಸರಾನ್ಗೆ ತನ್ನ ಪತ್ನಿ ಮೇಲೆ ಅನುಮಾನ ಮೂಡಲು ಪ್ರಾರಂಭವಾಗಿತ್ತು. ಯಾಕೆಂದರೆ, ಮದುವೆಗೂ ಮುಂಚೆ ಆಕೆಗೆ ಇನ್ನೊಬ್ಬನ ಜೊತೆ ಸಂಬಂಧ ಇತ್ತು ಎಂಬುವುದು ಎಂದು ಹೇಳಲಾಗ್ತಿದೆ. ಈ ವಿಚಾರವಾಗಿ ಪತಿ- ಪತ್ನಿ ನಡುವೆ ಜಗಳ ನಡೆಯುತ್ತಿತ್ತು.
ದಂಪತಿ ನಡುವಿನ ಜಗಳಕ್ಕೆ ಸಂಬಂಧಪಟ್ಟಂತೆ ರುಬೀನಾಳ ಪೋಷಕರು ಇಬ್ಬರನ್ನು ಕರೆದು ಸಂಧಾನ ಕೂಡ ಮಾಡಿಸಿದ್ದರು. ಆದರೂ, ಇವರ ವೈಮನಸ್ಸು ಸರಿಯಾಗಿರಲಿಲ್ಲ. ಈ ವಿಚಾರವಾಗಿ ನಿನ್ನೆ (ಭಾನುವಾರ ಆಗಸ್ಟ್ -15) ಇಬ್ಬರ ನಡುವೆ ಮತ್ತೆ ಜಗಳ ಶುರುವಾಗಿತ್ತು. ಗಲಾಟೆ ವಿಕೋಪಕ್ಕೆ ತಿರುಗಿ ಪ್ರಕರಣ ಉದಯಗಿರಿ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.
ಕೈ ಕತ್ತರಿಸಿ, ಕಾಲು ಕೊಚ್ಚಿದ ಆರೋಪಿಗಳು
ನಿನ್ನೆ ಸ್ವಾತಂತ್ರ್ಯ ದಿನಾಚರಣೆಯಾದ್ದರಿಂದ ಬ್ಯುಸಿ ಇದ್ದ ಪೊಲೀಸರು, ಧ್ವಜಾರೋಹಣದ ಬಳಿಕ ಬಂದು ಪ್ರಕರಣ ಇತ್ಯರ್ಥ ಮಾಡುತ್ತೇವೆ ಎಂದಿದ್ದರಂತೆ. ಈ ನಡುವೆ ತಮ್ಮ ಸಹೋದರಿ ಮೇಲೆ ಅನುಮಾನಪಟ್ಟ ಬಾವನನ್ನೇ ಮುಗಿಸಲು ರುಬೀನಾ ಸಹೋದರರು ಪ್ಲ್ಯಾನ್ ಮಾಡಿದ್ದರು. ಅದಕ್ಕಾಗಿ ಸಂಧಾನ ನೆಪದಲ್ಲಿ ಬಂದು ಸರಾನ್ನನ್ನು ಥಳಿಸಿ ಮನೆಗೆ ಕರೆದುಕೊಂಡು ಹೋಗಿದ್ದರು.
ತಮ್ಮ ಮಗನನ್ನು ಆತನ ಪತ್ನಿ ಮನೆಯವರು ಥಳಿಸಿ ಕರೆದುಕೊಂಡು ಹೋಗಿದ್ದರಿಂದ ಭಯಗೊಂಡ ಸರಾನ್ ಪೋಷಕರು, ಉದಯಗಿರಿ ಪೊಲೀಸ್ ಠಾಣೆಗೆ ತೆರಳಿ ವಿಷಯ ಮುಟ್ಟಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಸರಾನ್ನನ್ನು ಹುಡುಕಲು ಪ್ರಾರಂಭಿಸಿದ್ದರು. ಅಷ್ಟರಲ್ಲಿ ರುಬೀನಾ ಸಹೋದರ ಖದೀರ್ ಮತ್ತು ಮತ್ತೋರ್ವ ತಮ್ಮ ಶಾಂತಿನಗರ ಮನೆಗೆ ಸರಾನ್ನ್ನು ಕರೆದುಕೊಂಡು ಹೋಗಿ ಮನಬಂದಂತೆ ಹಲ್ಲೆ ನಡೆಸಿದ್ದರು.
ಕತ್ತರಿಸಿ ಕೈ ಹಿಡಿದುಕೊಂಡು ಪೊಲೀಸ್ ಠಾಣೆಗೆ ಬಂದ ಆರೋಪಿ
ಈ ವೇಳೆ ಸರಾನ್ ಸಂಬಂಧಿಯೂ ಸ್ಥಳದಲ್ಲೇ ಇದ್ದ. ಆದರೆ, ಅತನನ್ನು ಹೆದರಿಸಿದ ರುಬೀನಾ ಸಹೋದರರು, ಸರಾನ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ, ಕೈ ಕತ್ತರಿಸಿದ್ದಾರೆ. ಅಷ್ಟು ಸಾಲದೆಂಬಂತೆ ವಿಕೃತವಾಗಿ ಆತನ ಕಾಲನ್ನು ಕೊಚ್ಚಿ ಹಾಕಿದ್ದಾರೆ. ಬಳಿಕ ಖದೀರ್ ಸುರಾನ್ನ ಕತ್ತರಿಸಿದ ಕೈ ಹಿಡಿದುಕೊಂಡು ಉದಯಗಿರಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು ಇನ್ನುಳಿದ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
ಇದನ್ನೂ ಓದಿ: ನಡುರಸ್ತೆಯಲ್ಲೇ ಬಿ.ಟೆಕ್ ವಿದ್ಯಾರ್ಥಿನಿಯ ಬರ್ಬರ ಹತ್ಯೆ!