ಮೈಸೂರು: ನಗರದ ರೈಲ್ವೆ ನಿಲ್ದಾಣದಲ್ಲಿ ಸ್ಥಾಪಿಸಲಾಗಿರುವ ಸೆಲ್ಫಿ ಸ್ಪಾಟ್ ಅನ್ನು ಇಂದು ಸಂಸದ ಪ್ರತಾಪ್ ಸಿಂಹ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, "ಪ್ರಧಾನಿ ನರೇಂದ್ರ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಒಂಬತ್ತು ವರ್ಷಗಳಲ್ಲಿ ಹಲವಾರು ಜನಪರ ಮತ್ತು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದೆ. ನ್ಯೂ ಇಂಡಿಯಾ, ಕ್ಲೀನ್ ಇಂಡಿಯಾ ಎಂಬ ಥೀಮ್ಗಳನ್ನು ಇಟ್ಟುಕೊಂಡು ನೂರು ಕಡೆ ಸೆಲ್ಫಿ ಸ್ಪಾಟ್ ಮಾಡಿ, ಅಲ್ಲಿಗೆ ಜನ ಬಂದು ಸೆಲ್ಫಿ ತೆಗೆದುಕೊಳ್ಳುವುದರ ಜೊತೆಗೆ ಅವರಿಗೆ ಒಳ್ಳೆಯ ಸಂದೇಶವನ್ನು ಮನವರಿಕೆ ಮಾಡಿಕೊಡುವ ಪರಿಕಲ್ಪನೆಯನ್ನು ಕೇಂದ್ರ ವಾರ್ತಾ ಇಲಾಖೆ ಮೂಲಕ ಜಾರಿಗೆ ತರಲಾಗುತ್ತಿದೆ" ಎಂದರು.
"ಮೈಸೂರು ರೈಲ್ವೆ ನಿಲ್ದಾಣದಲ್ಲಿ ನ್ಯೂ ಇಂಡಿಯಾ, ಕ್ಲೀನ್ ಇಂಡಿಯಾ ಮತ್ತು ಸ್ವಚ್ಛ ಭಾರತ ಥೀಮ್ ಇಟ್ಟುಕೊಂಡು ವಾರ್ತಾ ಇಲಾಖೆ ಮೂಲಕ ಸೆಲ್ಫಿ ಸ್ಪಾಟ್ ಮಾಡಲಾಗಿದೆ. ಇಂದು ಅದರ ಉದ್ಘಾಟನೆ ಮಾಡಿದ್ದೇನೆ. ಮೈಸೂರು ರೈಲ್ವೆ ನಿಲ್ದಾಣ ಇಡೀ ದೇಶದಲ್ಲೇ ಅತಿ ಸ್ವಚ್ಛ ರೈಲ್ವೆ ನಿಲ್ದಾಣ ಎಂಬ ಹೆಸರು ಪಡೆದಿದೆ" ಎಂದು ಹೇಳಿದರು.
ಇದನ್ನೂ ಓದಿ: ಮೈಸೂರು: ಸ್ವಾತಂತ್ರ್ಯೋತ್ಸವ ಭಾಷಣ ವೇಳೆ ಸುಸ್ತಾಗಿ ಕುಳಿತ ಸಚಿವ ಮಹದೇವಪ್ಪ
ಮೈಸೂರು ರೈಲ್ವೆ ನಿಲ್ದಾಣದ ಅಭಿವೃದ್ಧಿ: "ಮುಂದಿನ ಮೂರು ವರ್ಷಗಳಲ್ಲಿ ಮೈಸೂರು ರೈಲ್ವೆ ನಿಲ್ದಾಣದಲ್ಲಿ ಸುಮಾರು 483 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ. ನಗರದ ಯಾದಗಿರಿ ಬಡಾವಣೆಯ ಕಡೆಯಿಂದ ಮೂರನೇ ಎಂಟ್ರಿ ಮಾಡಿದ್ದೇವೆ. ಹೊಸ ಟರ್ಮಿನಲ್ ಕೂಡ ಬರುತ್ತಿದೆ. ಸಬ್ ವೇ ಹಾಗೂ ಟರ್ಮಿನಲ್ ಸೇರಿ ಮತ್ತೊಂದು 200 ಕೋಟಿ ರೂ. ವೆಚ್ಚ ಆಗಬಹುದು. ಸುಮಾರು 700 ರಿಂದ 800 ಕೋಟಿ ರೂ. ಖರ್ಚು ಮಾಡಿ ಸುಸಜ್ಜಿತವಾದ ರೈಲ್ವೆ ನಿಲ್ದಾಣವನ್ನಾಗಿ ಮಾಡುತ್ತಿದ್ದೇವೆ. ಹೊಸದಾಗಿ 4 ಸ್ಟೇಬಲಿಂಗ್ ಲೈನ್, 4 ಪಿಟ್ ಲೈನ್, 3 ಫ್ಲಾಟ್ ಫಾರಂಗಳು, ಹಾಗೆಯೇ ನಾಗನಹಳ್ಳಿಯಲ್ಲಿ ಎರಡು ರೈಲ್ವೆ ಶೆಡ್ಗಳು ಬರುತ್ತಿವೆ" ಎಂದು ಸಂಸದರು ಮಾಹಿತಿ ನೀಡಿದರು.
"ಇಂದು ಬೆಂಗಳೂರಿನಲ್ಲಿ ಯಾವ ರೀತಿಯ ಸಮಸ್ಯೆಗಳು ಆಗುತ್ತಿವೆಯೋ ಆ ರೀತಿಯ ಸಮಸ್ಯೆಗಳು ಮುಂದಿನ ನೂರು ವರ್ಷಗಳವರೆಗೆ ಮೈಸೂರಿನಲ್ಲಿ ಆಗಬಾರದು ಎಂಬ ಕಲ್ಪನೆಯನ್ನು ಇಟ್ಟುಕೊಂಡು ಈ ರೀತಿಯ ಕೆಲಸ ಮಾಡಲಾಗುತ್ತಿದೆ. ಮೈಸೂರಿನ ಮುಂದಿನ ಭವಿಷ್ಯಕ್ಕೆ ಇದು ಪೂರಕವಾಗಲಿದೆ. ಈಗಾಗಲೇ ಹಲವು ಕಾಮಗಾರಿಗಳಿಗೆ ಟೆಂಡರ್ ಸಹ ಕರೆಯಲಾಗಿದ್ದು, ಡಿಸೆಂಬರ್ನಲ್ಲಿ ಕೆಲಸ ಶುರುವಾಗಲಿದೆ. ಟರ್ಮಿನಲ್ಗೂ ಕೂಡ ಡಿಪಿಆರ್ ರೆಡಿಯಾಗಿದ್ದು, ಅದಕ್ಕೂ ಸಹ ಚಾಲನೆ ಸಿಗಲಿದೆ" ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಇದನ್ನೂ ಓದಿ: Vidhana Soudha: ವಿಧಾನಸೌಧ ಜಗಮಗ: ವೀಕ್ಷಿಸಲು ಬರುವ ಸಾರ್ವಜನಿಕರಿಗೆ ಸಂಚಾರಿ ಪೊಲೀಸರ ಸೂಚನೆ