ಮೈಸೂರು: ಬಿಜೆಪಿ ಸೇರುವಂತೆ ನನಗೆ ಹಣದ ಆಮಿಷವನ್ನು ತೋರಿಸಿ ಯಡಿಯೂರಪ್ಪನವರ ಮಗ ಹಣ ಕೊಡಲು ಬಂದಾಗ ಯಡಿಯೂರಪ್ಪ ಹಾಗೂ ಸಂಸದ ಶ್ರೀನಿವಾಸ್ ಪ್ರಸಾದ್ ಇಬ್ಬರೂ ಇದ್ದರು. ಈ ಘಟನೆ ಬೆಂಗಳೂರಿನಲ್ಲಿ ವಿಜಯೇಂದ್ರ ಅವರ ಅಪಾರ್ಟ್ಮೆಂಟ್ನಲ್ಲಿ ನಡೆದಿತ್ತು. ಈ ವಿಚಾರ ನನ್ನ ಬಾಂಬೆ ಡೇಸ್ ಪುಸ್ತಕದ ಮೊದಲ ಅಧ್ಯಾಯದಲ್ಲಿ ಇದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಹೇಳಿದ್ದಾರೆ.
ಇಂದು ಪತ್ರಕರ್ತರ ಭವನದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಮುಖವಾಗಿ ನಾನು ಜೆಡಿಎಸ್ನಲ್ಲಿ ರಾಜ್ಯಾಧ್ಯಕ್ಷನಾಗಿ ಹಾಗೂ ಶಾಸಕನಾಗಿ ಇದ್ದ ಸಂದರ್ಭದಲ್ಲಿ ಸಂಸದ ಶ್ರೀನಿವಾಸ್ ಪ್ರಸಾದ್, ಬೆಂಗಳೂರಿನಲ್ಲಿ ಯಡಿಯೂರಪ್ಪನವರ ಮಗ ಬಿ ವೈ ವಿಜಯೇಂದ್ರ ಅವರ ಅಪಾರ್ಟ್ಮೆಂಟ್ನಲ್ಲಿ ನನಗೆ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರುವಂತೆ ಆಹ್ವಾನ ನೀಡಿದ್ದರು.
ಇದೇ ಸಂದರ್ಭದಲ್ಲಿ ವಿಜಯೇಂದ್ರ ನನಗೆ ಹಣದ ಆಮಿಷವೊಡ್ಡಿದ್ದರು ಎಂದ ವಿಶ್ವನಾಥ್, ಎಷ್ಟು ಹಣ ತೆಗೆದಕೊಂಡಿದ್ದಿರ ಎಂಬ ಪ್ರಶ್ನೆಗೆ ಉತ್ತರಿಸಿದೆ ಈ ವಿಚಾರ ನನ್ನ ಬಾಂಬೆ ಡೇಸ್ ಪುಸ್ತಕದ ಮೊದಲ ಅಧ್ಯಾಯದಲ್ಲಿ ಉಲ್ಲೇಖ ಮಾಡಲಾಗಿದೆ ಎಂದರು. ಮುಂದಿನ ಚುನಾವಣೆಯ ವೇಳೆಗೆ ಬಾಂಬೆ ಡೇಸ್ ಪುಸ್ತಕ ಬಿಡುಗಡೆ ಆಗುವ ಬಗ್ಗೆ ಸುಳಿವು ನೀಡಿದರು.
ನಾನು ಬಿಜೆಪಿ ಸೇರಿದ ಮೇಲೆ ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ನಾನು ಚುನಾವಣೆಯಲ್ಲಿ ಸೋತ ಮೇಲೆ ಯಡಿಯೂರಪ್ಪ ನನ್ನನ್ನು ಎಂಎಲ್ಸಿ ಮಾಡಲು ಹಿಂದೇಟು ಹಾಕಿದರು. ಆ ಸಂದರ್ಭದಲ್ಲಿ ಆರ್ಎಸ್ಎಸ್ನ ಮುಕುಂದ್ ನನ್ನ ಹೆಸರನ್ನ ಬಿಜೆಪಿಯ ಎಂಎಲ್ಸಿ ಪಟ್ಟಿಯಲ್ಲಿ ಸೇರಿಸಿದರು. ಎಂಎಲ್ಸಿ ಮಾಡಿದ್ದು ಯಡಿಯೂರಪ್ಪ ಅಲ್ಲ. ನಾನು ಸೋತ ಸಂದರ್ಭದಲ್ಲಿ ಯಾವೊಬ್ಬ ಬಿಜೆಪಿ ನಾಯಕರೂ ನನ್ನ ನೆರವಿಗೆ ಬರಲಿಲ್ಲ ಎಂದು ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.
ಅಲೆಮಾರಿಗಳ ರಾಜ ಸಂಸದ ಶ್ರೀನಿವಾಸ್ ಪ್ರಸಾದ್: ನನ್ನನ್ನು ಸಂಸದ ಶ್ರೀನಿವಾಸ್ ಪ್ರಸಾದ್, ವಿಶ್ವನಾಥ್ ಅಲೆಮಾರಿ ರಾಜಕಾರಣಿ ಎಂದು ಟೀಕೆ ಮಾಡಿರುವುದು ಸರಿಯಲ್ಲ. ನನ್ನನ್ನು ಅಲೆಮಾರಿ ರಾಜಕಾರಣಿ ಎಂದು ಟೀಕಿಸುವ ನೀವು ಎಷ್ಟು ಪಕ್ಷವನ್ನು ಬದಲಾವಣೆ ಮಾಡಿದ್ದೀರಿ, ಒಂದೊಂದೇ ಪಕ್ಷವನ್ನು ಎರಡೆರಡು ಬಾರಿ ಸೇರ್ಪಡೆ ಆಗಿದ್ದೀರಿ, ನೀವು ಅಲೆಮಾರಿ ರಾಜಕಾರಣಿಗಳ ರಾಜ ಎಂದು ಟೀಕಿಸಿದರು. ನಾನು ಕಾಂಗ್ರೆಸ್ನ ನಾಯಕರನ್ನು ಭೇಟಿ ಮಾಡಿದ್ದು ಘೋರ ಅಪರಾಧ ಎಂಬಂತೆ ಬಿಂಬಿಸುತ್ತಿದ್ದಿರಿ. ನೀವು ಯಾರನ್ನು ಮೆಚ್ಚಿಸಲು ನನ್ನ ವಿರುದ್ಧ ಮಾತನಾಡುತ್ತಿದ್ದಿರಿ ಎಂದು ಹೆಚ್ ವಿಶ್ವನಾಥ್ ಪ್ರಶ್ನಿಸಿದರು.
ನೀವು ಸಂಸದರಾಗಿ ಕ್ಷೇತ್ರದ ಕಡೆ ಕೆಲಸ ಮಾಡುವುದನ್ನು ಬಿಟ್ಟು ಏಕಾಏಕಿ ನನ್ನ ವಿರುದ್ಧ ತಿರುಗಿ ಬೀಳಲು ಕಾರಣ ಎಂದರೆ ಶೀಘ್ರವೇ ರಾಜ್ಯ ಸಂಪುಟ ವಿಸ್ತರಣೆ ಆಗಲಿದ್ದು, ಅದರಲ್ಲಿ ತಮ್ಮ ಅಳಿಯನಿಗೆ ಅವಕಾಶ ಕೊಡಿಸಲು ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಿರ ಎಂದು ಶ್ರೀನಿವಾಸ್ ಪ್ರಸಾದ್ ವಿರುದ್ದ ಹಳ್ಳಿಹಕ್ಕಿ ಕಿಡಿಕಾರಿದರು.
ನಾನು ಬಿಜೆಪಿ ಎಂಎಲ್ಸಿ: ನಾನು ಯಾವುದೇ ಕಾಂಗ್ರೆಸ್ ನಾಯಕರನ್ನು ಕದ್ದುಮುಚ್ಚಿ ಭೇಟಿ ಆಗಿಲ್ಲ, ಎಲ್ಲ ಮಾಧ್ಯಮದವರಿಗೆ ಗೊತ್ತಾಗುವಂತೆ ನೇರವಾಗಿಯೇ ಭೇಟಿ ಮಾಡಿದ್ದೇನೆ. ನಾನು ತುಂಬಾ ವರ್ಷ ಕಾಂಗ್ರೆಸ್ನಲ್ಲಿ ಇದ್ದೆ, ತುಂಬಾ ಜನ ಕಾಂಗ್ರೆಸ್ ಸ್ನೇಹಿತರು ಇದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರನ್ನು ಸೌಜನ್ಯಕ್ಕೆ ಭೇಟಿ ಆಗಿದ್ದೆ. ನಾನು ಎಲ್ಲಿಯೂ ಕಾಂಗ್ರೆಸ್ ಸೇರ್ಪಡೆ ಆಗುತ್ತೇನೆ ಎಂದು ಹೇಳಿಲ್ಲ. ಈಗ ನಾನು ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಂದು ವಿಶ್ವನಾಥ್ ಹೇಳಿದರು.
ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಈಗಲೇ ಹೇಳುವುದಿಲ್ಲ ಎಂದ ವಿಶ್ವನಾಥ್, 2023ರ ಚುನಾವಣೆ ಏನೇನು ಆಗುತ್ತದೆ ಎಂಬುದು ಗೊತ್ತಿಲ್ಲ. ಎಲ್ಲಾ ರಿಯಲ್ ಎಸ್ಟೇಟ್ ಗಿರಾಕಿಗಳೇ ಟಿಕೆಟ್ ಪಡೆಯಲು ಬಂಡವಾಳ ಹಾಕುತ್ತಿದ್ದಾರೆ. ಮುಂದಿನ ಚುನಾವಣೆಯನ್ನು ನೆನೆದರೆ ಭಯವಾಗುತ್ತದೆ ಎಂದರು.
ಇದನ್ನೂ ಓದಿ: ರಾಜ್ಯ ಸರ್ಕಾರದ ಮೇಲಿದ್ದ ನಿರೀಕ್ಷೆಗಳೆಲ್ಲ ಸುಳ್ಳಾದವು: ಹೆಚ್.ವಿಶ್ವನಾಥ್