ಮೈಸೂರು: ಹುಣಸೂರು ಉಪ ಚುನಾವಣೆ ಮತದಾನಕ್ಕೆ ಇನ್ನು ಮೂರೇ ದಿನ ಬಾಕಿಯಿದ್ದು, ಮೂರು ಪಕ್ಷಗಳು ಅಬ್ಬರದಿಂದ ಪ್ರಚಾರ ಮಾಡುತ್ತಿವೆ. ಹುಣಸೂರು ತಾಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಪರವಾಗಿ ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಮತಯಾಚಿಸಿದರು.
ಪ್ರಚಾರದ ವೇಳೆಯಲ್ಲಿ ಶ್ರೀನಿವಾಸ್ ಪ್ರಸಾದ್ ಹಾಗೂ ಹೆಚ್.ವಿಶ್ವನಾಥ್ ಅವರಿಗೆ ಗ್ರಾಮದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬೃಹತ್ ಸೇಬಿನ ಹಾರ ಹಾಕಿ ಅದ್ದೂರಿಯಾಗಿ ಸ್ವಾಗತಿಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ವಿ.ಶ್ರೀನಿವಾಸ್ ಪ್ರಸಾದ್, ನಾನು ಮಾಜಿ ಸಂಸದ ಆರ್.ಧ್ರುವನಾರಾಯಣ ಅವರ ವಿರುದ್ಧ ಕಡಿಮೆ ಅಂತರದಲ್ಲಿ ಗೆದ್ದಿರಬಹುದು. ಆದರೆ ಲಕ್ಷದ ಅಂತರದಲ್ಲಿದ್ದ ಅವರು ಯಾಕೆ ಕೆಳಗೆ ಇಳಿದರು ಎಂಬುವುದನ್ನು ಅವರು ಅರಿತುಕೊಳ್ಳಲಿ ಎಂದು ವ್ಯಂಗ್ಯವಾಡಿದರು.
ಜೆಡಿಎಸ್ ಹಾಗೂ ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿರುವುದು ಚುನಾವಣೆ ಗಿಮಿಕ್, ಇಬ್ಬರು ಸೇರಿ ಸರ್ಕಾರ ನಡೆಸುತ್ತಾರಾ? ಬಿಜೆಪಿ ಗೆದ್ದರೆ ಮೂರು ವರ್ಷ ಚುನಾವಣೆ ಬರುವುದಿಲ್ಲ. ಮಧ್ಯಂತರ ಚುನಾವಣೆ ಬೇಕೋ ಅಥವಾ ಬೇಡವೋ ಎಂಬುದನ್ನು ಜನರು ನಿರ್ಧಾರ ಮಾಡುತ್ತಾರೆ ಎಂದರು.