ಮೈಸೂರು: ಕುರುಬ ಸಮುದಾಯದ ಸ್ವಾಮೀಜಿಯನ್ನು ಅವಹೇಳನ ಮಾಡಿರುವ ಆರೋಪ ಎದುರಿಸುತ್ತಿರುವ ಸಚಿವ ಮಾಧುಸ್ವಾಮಿ ಕ್ಷಮೆ ಕೇಳಬೇಕಿತ್ತು. ಇದನ್ನು ಇಲ್ಲಿಗೆ ಮುಗಿಸೋಣ, ಸುಮ್ಮನೆ ಜಾತಿ ಬಣ್ಣ ಕಟ್ಟುವುದು ಸರಿಯಲ್ಲವೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸಚಿವ ಮಾಧುಸ್ವಾಮಿ ಕುರುಬ ಸಮುದಾಯದ ಸ್ವಾಮೀಜಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರೆಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದ ಸಚಿವರಾಗಿ ಆ ರೀತಿ ಮಾತನಾಡಬಾರದಿತ್ತು ಎಂದರು.
ಇನ್ನು ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡರ ಜೊತೆ ಅವರು ಏಕೆ ತಟಸ್ಥರಾಗಿದ್ದಾರೆಂಬ ಬಗ್ಗೆ ಪ್ರತಿಕ್ರಿಯಿಸಿ ಅವರ ಜೊತೆ ಮಾತನಾಡಿ, ಅವರ ಮನಸ್ಥಿತಿ ಹೇಗಿದೆ ಎಂಬುದನ್ನು ತಿಳಿದುಕೊಳ್ಳುತ್ತೇನೆಂದು ಸಿದ್ದರಾಮಯ್ಯ ತಿಳಿಸಿದರು.
16 ಅನರ್ಹ ಶಾಸಕರು ಪಕ್ಷಾಂತರ ಮಾಡಿರುವುದನ್ನು ಜನ ಸಹಿಸುವುದಿಲ್ಲ, ಎಲ್ಲ ಅನರ್ಹ ಶಾಸಕರನ್ನು ಜನರೇ ಸೋಲಿಸುತ್ತಾರೆ. ಹಣದ ಆಮಿಷಗಳಿಂದ ಚುನಾವಣೆ ಗೆಲ್ಲಲು ಬಿಜೆಪಿ ಅವರು ಯತ್ನಿಸುತ್ತಿದ್ದಾರೆ, ಅದೆಲ್ಲಾ ನಡೆಯುವುದಿಲ್ಲ ಪ್ರತಿಪಕ್ಷ ನಾಯಕ ಹೇಳಿದ್ರು.
ಇನ್ನು ಆಪರೇಷನ್ ಕಮಲದಿಂದ ಎಂಟಿಬಿ ನಾಗರಾಜ್ ಹಣ ಪಡೆದಿಲ್ಲ, ಬದಲಾಗಿ, ಬಿಜೆಪಿಗೆ ಎಂಟಿಬಿ ಸಾಲ ಕೊಟ್ಟಿದ್ದಾನೆ. ಅದಕ್ಕಾಗಿಯೇ ಯಡಿಯೂರಪ್ಪ ಅವರಿಗೆ ಎಂಟಿಬಿ ಮೇಲೆ ಅಷ್ಟೊಂದು ಪ್ರೀತಿ ಎಂದರು. ಎಂಟಿಬಿಯಿಂದ ನಾನು ಸಾಲ ಪಡೆದಿಲ್ಲ, ಸಾಲ ಪಡೆದಿದ್ದ ಕೃಷ್ಣಭೈರೇಗೌಡ ಈಗಾಗಲೇ ಸಾಲ ತೀರಿಸಿದ್ದಾರೆ. ಎಂಟಿಬಿ ಹತಾಶೆಯಿಂದ ಏನೇನೊ ಹೇಳುತ್ತಿದ್ದಾರೆ. ಆತನ ಹೇಳಿಕೆಗೆ ಮಹತ್ವ ಕೊಡಬೇಕಾಗಿಲ್ಲವೆಂದು ಸಿದ್ದರಾಮಯ್ಯ ಕುಟುಕಿದರು.