ಮೈಸೂರು: ರೈತರ ಹೋರಾಟಗಳನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ ರೈತರು ಇದೆಕ್ಕೆಲ್ಲ ಹೆದರುವುದಿಲ್ಲ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ಮಾಧ್ಯಮಗಳಿಗೆ ಪ್ರಕಟಣೆ ಬಿಡುಗಡೆ ಮಾಡಿರುವ ಇವರು, ದೆಹಲಿ ರೈತರ ಹೋರಾಟದ ಕರೆ ಬೆಂಬಲಿಸಿ ಫೆ. 6ರಂದು ರಾಜ್ಯಾದ್ಯಂತ ರಸ್ತೆ ತಡೆ ಚಳವಳಿ ನಡೆಸಲಾಗುವುದು. ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಪೊಲೀಸ್ ಬಲದ ಮೂಲಕ ಸಾಕಷ್ಟು ಕಿರುಕುಳ ನೀಡುತ್ತಿದೆ. ಇದೇ ಸರ್ಕಾರ ಚಳವಳಿನಿರತ ರೈತರ ಜೊತೆ ಮಾತುಕತೆಗೆ ಸಿದ್ಧ ಎನ್ನುವ ಸಂದೇಶ ನೀಡುತ್ತಿದೆ. ಚಳವಳಿ ನಡೆಯುತ್ತಿರುವ ಜಾಗದಲ್ಲಿ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಿರುವುದು, ರಸ್ತೆಗಳಿಗೆ ಮುಳ್ಳು ತಂತಿ ಬೇಲಿ ಹಾಕಿರುವುದು ಇಬ್ಬಗೆ ನೀತಿ ಆಗಿದೆ ಎಂದು ಕಿಡಿಕಾರಿದರು.
ಇದರ ವಿರುದ್ಧ ಶಾಂತಿಯುತ ಹೋರಾಟ ನಡೆಸಲು ರಾಷ್ಟ್ರ ಮಟ್ಟದ ಕಿಸಾನ್ ಸಂಯುಕ್ತ ಮೋರ್ಚಾ ಕರೆ ಮೇರೆಗೆ ರಾಜ್ಯದಲ್ಲಿಯೂ ರೈತ, ದಲಿತ, ಕಾರ್ಮಿಕ ಐಕ್ಯಹೋರಾಟ 6ರಂದು ರಾಷ್ಟ್ರೀಯ ಹೆದ್ದಾರಿಗಳಲ್ಲಿ 12 ಗಂಟೆಯಿಂದ 2 ಗಂಟೆ ತನಕ ರಸ್ತೆ ಬಂದ್ ಚಳವಳಿ ನಡೆಸುವ ಮೂಲಕ ದೇಶದ ರೈತರ ಹೋರಾಟವನ್ನು ಬೆಂಬಲಿಸಬೇಕು. ಈ ಹೋರಾಟ ಸರ್ಕಾರ ಎಚ್ಚರಿಕೆಯ ಸಂದೇಶ ನೀಡುತ್ತದೆ ಎಂದಿದ್ದಾರೆ.
ಪ್ರತಿಭಟನಾನಿರತ ರೈತರ ಮೇಲೆ ಹಾಗೂ ಈ ಹೋರಾಟದ ಬಗ್ಗೆ ಮಾಧ್ಯಮಗಳಿಗೆ ಸುದ್ದಿ ಮಾಡುತ್ತಿದ್ದ ವರದಿಗಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದು ಖಂಡನೀಯ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಯು ಸಹ ಇಂತಹ ಅತಿರೇಕದ ಕಾರ್ಯ ನಡೆದಿಲ್ಲ. ಜನತಂತ್ರ ವ್ಯವಸ್ಥೆಗೆ ಮಾಡಿದ ಅಪಮಾನ ಇದು. ಕೇಂದ್ರ ಸರ್ಕಾರ ಜಾರಿ ಮಾಡಿರುವ ಕಾಯ್ದೆಗಳನ್ನು ವಾಪಸ್ ಪಡಯಬೇಕು. ಕೃಷಿ ಉತ್ಪನ್ನಗಳಿಗೆ ಶಾಸನಬದ್ಧ ಖಾತರಿ ಬೆಂಬಲ ಬೆಲೆ ನಿಗದಿ ಮಾಡುವ ವ್ಯವಸ್ಥೆ ಜಾರಿಯಾಗಬೇಕು ಎಂದರು.