ಮೈಸೂರು: ಸಂಸದ ಪ್ರತಾಪ್ ಸಿಂಹ ಅವರು ದಿನ ನಿತ್ಯ ಹಿಟ್ ಅಂಡ್ ರನ್ ಹೇಳಿಕೆ ಕೊಟ್ಟು ಓಡಿಹೋಗುವ ಡೋಂಗಿ ರಾಜಕಾರಣಿ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು. ನಗರದ ಜಲದರ್ಶಿನಿ ಅತಿಥಿ ಗೃಹದ ಆವರಣದಲ್ಲಿರುವ ಸಂಸದ ಪ್ರತಾಪ್ ಸಿಂಹ ಕಚೇರಿಯ ಬಳಿ ಮೈಸೂರಿನ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮೈಸೂರು ಜಿಲ್ಲೆಗೆ ಸಿದ್ದರಾಮಯ್ಯ ಕೊಡುಗೆ ಏನೂ ಇಲ್ಲ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್, ಸಿದ್ದರಾಮಯ್ಯ ಅವರ ಕೊಡುಗೆ ಏನು ಎಂಬ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿ ಬಳಿಕ ಮಾತನಾಡಿದರು.
ಪ್ರತಾಪ್ ಸಿಂಹ ಮಾಧ್ಯಮಗಳ ಮುಂದೆ ಮಾತ್ರ ಪೌರುಷ ತೋರಿಸುತ್ತಾರೆ. ನಾನು ಇಂದು ದಾಖಲೆಗಳನ್ನು ತೆಗೆದುಕೊಂಡು ಬಂದಿದ್ದೇನೆ. 2013 ರಿಂದ 2018ರ ವರೆಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಮೈಸೂರು ನಗರಕ್ಕೆ ಮತ್ತು ಮೈಸೂರು ನಗರ ವ್ಯಾಪ್ತಿಗೆ ಬರುವ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಅವರು ಕೊಟ್ಟಿರುವ ಹಣ 3,800 ಕೋಟಿ. ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯ ವರೆಗೆ ಮೈಸೂರು ನಗರದ ಅಭಿವೃದ್ಧಿಗೆ ಇಷ್ಟು ದೊಡ್ಡ ಪ್ರಮಾಣ ಅನುದಾನ ಕೊಟ್ಟಂತಹ ಉದಾಹರಣೆಗಳೇ ಇಲ್ಲ. ಕಳೆದ ನಾಲ್ಕು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಬಿಜೆಪಿ 100 ಕೋಟಿ ಅನುದಾನವನ್ನು ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.
ಹಿಂದೆ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಮೈಸೂರು ಜಿಲ್ಲೆಗೆ 22,000 ಕೋಟಿ ರೂಪಾಯಿ ಕೊಟ್ಟಿದ್ದಾರೆ. ಇದಕ್ಕೆ ದಾಖಲೆಗಳಾಗಿವೆ. ಪ್ರತಾಪ್ ಸಿಂಹ ಅವರು ಕಳೆದ ಒಂಬತ್ತು ವರ್ಷಗಳಿಂದ ಮೈಸೂರು ಜಿಲ್ಲೆಯ ಸಂಸದರಾಗಿದ್ದಾರೆ. ಅವರೇ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾರೆ. ಅವರ ವಿಶ್ವಗುರುವೇ ಪ್ರಧಾನಿ ಮಂತ್ರಿಯಾಗಿದ್ದಾರೆ. ಚುನಾವಣೆ ಸಮಯದಲ್ಲಿ ಮೈಸೂರಿಗೆ ಬಂದುಹೋಗುವ ಪ್ರಧಾನಿ ಮಂತ್ರಿಗಳು, ಮೈಸೂರನ್ನು ಸ್ವಿಡ್ಜರ್ಲ್ಯಾಂಡ್ ಮಾಡುತ್ತೇವೆ, ಪ್ಯಾರಿಸ್ ಮಾಡುತ್ತೇವೆ ಎಂದು ಹೇಳಿಕೆ ಕೊಟ್ಟು ಹೋಗುತ್ತಾರೆ. ಮೈಸೂರಿಗೆ ಇಲ್ಲಿಯ ವರೆಗೂ ಒಂದು ಪೈಸೆ ಕೊಟ್ಟಿದ್ದರೆ ತೋರಿಸಿ? ಎಂದು ಪ್ರಶ್ನಿಸಿದರು.
ಮೈಸೂರು ಏರ್ಪೋರ್ಟ್ ಯುಪಿಎ ಸರ್ಕಾರ ಅವಧಿಯಲ್ಲಿ ಆಗಿರುವುದು. ಅದನ್ನು ವಿಸ್ತರಣೆ ಮಾಡುವುದಕ್ಕೆ ಒಂದು ಪೈಸೆ ಕೊಡಲಿಲ್ಲ ಇವರು. ಇವರು ಹೋಗಿ ಅಧಿಕಾರಿಗಳ ಜೊತೆ ಚರ್ಚೆ ಮಾಡುವುದು, ಫೋಟೋವನ್ನು ಪತ್ರಿಕೆಗಳಲ್ಲಿ ಹಾಕಿಸಿಕೊಳ್ಳುವುದನ್ನು ಬಿಟ್ಟರೆ ಬೇರೆ ಏನೂ ಮಾಡಿಲ್ಲ. ಕೇವಲ ಸುಳ್ಳು ಹೇಳುವ ವ್ಯಕ್ತಿ ಪ್ರತಾಪ್ ಸಿಂಹ, ಇದುವರೆಗೂ 50 ಕೋಟಿ ಅನುದಾನ ತಂದಿಲ್ಲ. ರಿಂಗ್ ರೋಡ್ ಮಾಡಿದ್ದು ನಾನೇ ಎಂದು ಸಂಸದರು ಹೇಳುತ್ತಾರೆ, ಆದರೆ ರಿಂಗ್ ರೋಡ್ ಆಗಿದ್ದು ಎಡಿಬಿ ಲೋನ್ನಲ್ಲಿ. ಕಾರ್ಪೊರೇಟರ್ ಮಾಡಿದ್ದನ್ನು ನಾನು ಮಾಡಿದ್ದೇನೆ ಎಂದು ಪ್ರತಾಪ್ ಸಿಂಹ ಹೇಳಿಕೊಳ್ಳುತ್ತಾರೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಪ್ರತಾಪ್ ಸಿಂಹ ಅವರನ್ನು ಮೈಸೂರು - ಕೊಡಗು ಮತದಾರರು ಮನೆಗೆ ಕಳುಹಿಸುತ್ತಾರೆ ಎಂದು ಹೇಳಿದರು.
ಬಿಗಿ ಪೊಲೀಸ್ ಬಂದೋಬಸ್ತ್: ಜಿಲ್ಲಾ ಕಾಂಗ್ರೆಸ್ ಮುಖಂಡರು, ಸಂಸದ ಪ್ರತಾಪ್ ಸಿಂಹ ಅವರ ಮೈಸೂರು ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ ಕೊಡುಗೆ ಏನೂ ಇಲ್ಲ ಎಂಬ ಹೇಳಿಕೆಯನ್ನು ವಿರೋಧಿಸಿ ಸಂಸದರ ಕಚೇರಿ ಎದುರು ಸಿದ್ದರಾಮಯ್ಯ ಸಾಧನೆಗಳ ಬಗ್ಗೆ ಬಹಿರಂಗ ಚರ್ಚೆಗೆ ಬಂದ ಹಿನ್ನೆಲೆಯಲ್ಲಿ ಜಲದರ್ಶಿನಿ ಅತಿಥಿ ಗೃಹದ ಮುಖ್ಯ ದ್ವಾರವನ್ನು ಬಂದ್ ಮಾಡಲಾಗಿದ್ದು. ಮುನ್ನೆಚ್ಚರಿಕೆ ಕ್ರಮವಾಗಿ ಕಾನೂನು ಸುವ್ಯವಸ್ಥೆ ಡಿಸಿಪಿ ಮತ್ತುರಾಜ್ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ.
ಇದನ್ನೂ ಓದಿ: ದೇಶದ ಹೆಸರು ಬದಲಾವಣೆಗಿಂತ ಜನರ ಬದುಕು ಬದಲಾವಣೆ ಮುಖ್ಯ: ಡಿಸಿಎಂ ಡಿ.ಕೆ.ಶಿವಕುಮಾರ್