ಮೈಸೂರು: ಅನರ್ಹರ ಆಗಮನದಿಂದ ಆಡಳಿತಾರೂಢ ಬಿಜೆಪಿಯಲ್ಲಿ ಗೊಂದಲಗಳು ಸೃಷ್ಟಿಯಾಗಿದ್ದು ನಿಜ. ಆದರೆ, ಅವುಗಳನ್ನು ಖಂಡಿತ ಬಗೆಹರಿಸಿಕೊಳ್ಳುತ್ತೇವೆ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
ನಗರದ ರೈಲ್ವೆ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ತೀರ್ಪಿನ ನಂತರ ಎಲ್ಲರೂ ಬಿಜೆಪಿ ಪಕ್ಷ ಸೇರಿದ್ದಾರೆ. ಉಪ ಚುನಾವಣೆಗೆ ನಾಮಪತ್ರವನ್ನು ಇನ್ನೆರಡು ದಿನಗಳಲ್ಲಿ ಸಲ್ಲಿಸಲಿದ್ದಾರೆ. ಉಪ ಚುನಾವಣೆ ಸಂಬಂಧ 3 ಪಕ್ಷಗಳಲ್ಲಿ ಗೊಂದಲಗಳಿರುವುದು ನಿಜ. ಬಿಜೆಪಿಯಲ್ಲಿ ಹೊಸಕೋಟೆ ಕ್ಷೇತ್ರದ ಬಗ್ಗೆ ಗೊಂದಲವಿದೆ. ಅದನ್ನು ಪಕ್ಷ ಸರಿ ಮಾಡುತ್ತದೆ ಎಂದು ಸ್ಪಷ್ಟಪಡಿಸಿದರು.
ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಹಿರಂಗವಾಗಿಯೇ ಶರತ್ ಬಚ್ಚೇಗೌಡ ಅವರಿಗೆ ಬೆಂಬಲ ಕೊಡುತ್ತೇವೆ ಎಂದು ಹೇಳಿದ್ದಾರೆ. ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶರತ್ ಬಚ್ಚೇಗೌಡ ಸೋಲುವುದಕ್ಕೆ ಕುಮಾರಸ್ವಾಮಿ ಅವರೇ ಕಾರಣ ಅನ್ನುವುದನ್ನು ಇಲ್ಲಿ ಮರೆಯಬಾರದು. ಈ ತರಹದ ರಾಜಕೀಯ ಏನು ಎಂಬುದು ಗೊತ್ತಾಗುವುದಿಲ್ಲ. ಜನ ಇದನ್ನೆಲ್ಲಾ ಗಮನಿಸುತ್ತಿದ್ದಾರೆ ಎಂದರು.
ಮಾಜಿ ಸಚಿವ ರೋಷನ್ ಬೇಗ್ ಹಾಗೂ ಅವರ ಮಗ ಬಿಜೆಪಿ ಸೇರ್ಪಡೆ ಬಗ್ಗೆ ಮಾತುಕತೆ ನಡೆಯುತ್ತಿದೆ. ಮಾತುಕತೆ ಬಳಿಕ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ತೀರ್ಮಾನವಾಗುತ್ತದೆ ಎಂದರು.