ಮೈಸೂರು: ದಸರಾ ನಿಮಿತ್ತ ಇಂದು ಕಲಾಮಂದಿರಲ್ಲಿ ಕವಿಗೋಷ್ಠಿ ಉದ್ಘಾಟನಾ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಾಗಿದ್ದ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಸಾಹಿತ್ಯದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ನಾಲ್ವಡಿ ಕೃಷ್ಣರಾಜ ಅವರ ಆಡಳಿತವು ಈಗಿನ ಸಾಹಿತ್ಯ ಚಳವಳಿಗೆ ಪ್ರೇರಣೆಯಾಗಲಿ. ಈ ಕವಿಗೋಷ್ಠಿ ವೇದಿಕೆಯಲ್ಲಿ ಸಮಾಜದ ಎಲ್ಲ ಸಮಸ್ಯೆಗಳನ್ನು ಕುರಿತು ಸುದೀರ್ಘ ಚರ್ಚೆಯಾಗಲಿ ಎಂದರು.
ಮುಂದುವರೆದು, ಸಾಹಿತ್ಯ ಕ್ಷೇತ್ರವು ಸಮಾಜದ ಮೇಲೆ ಪ್ರಭಾವ ಬೀರುತ್ತದೆ. ಸಾಹಿತ್ಯಕ್ಕೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಶಕ್ತಿ ಇದೆ. ಈ ಮೂಲಕ ಸಾಹಿತ್ಯ ಜನರಲ್ಲಿ ಜಾಗೃತಿ ಮೂಡಿಸುವಂತಾಗಲಿ ಎಂದು ಸಚಿವರು ಕಾರ್ಯಕ್ರಮದಲ್ಲಿ ಸೇರಿದ್ದವರನ್ನು ಉದ್ದೇಶಿಸಿ ಮಾತನಾಡಿದರು. ಹಾಗೇ ಮರ್ಯಾದೆ ಹತ್ಯೆಯಂತಹ ಘಟನೆಗಳು ಮಾನವ ಕುಲ ತಲೆತಗ್ಗಿಸುವಂತದ್ದು. ಈ ರೀತಿಯ ಅನಿಷ್ಟ ಪದ್ದತಿಗಳನ್ನು ವಿರೋಧಿಸುವ ಮೂಲಕ ತೊಲಗಿಸಬೇಕು ಎಂದು ಸಲಹೆ ನೀಡಿದರು.
ಕನ್ನಡ ಭಾಷೆ ಕುರಿತು ಚಿಂತಿಸುವ ಅವಶ್ಯಕತೆ ಇದೆ - ಜಯಂತ್ ಕಾಯ್ಕಿಣಿ: ನಂತರ ಖ್ಯಾತ ಸಾಹಿತಿ ಹಾಗೂ ಕವಿ ಜಯಂತ್ ಕಾಯ್ಕಿಣಿ ಮಾತನಾಡಿದರು. ಸಾಹಿತ್ಯ ಎನ್ನುವಂತದ್ದು ವೈಚಾರಿಕತೆಯ ನವ ಬಾಗಿಲನ್ನು ತೆರೆಯುತ್ತದೆ. ಕನ್ನಡ ಪಾಠಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕರು ಕೂಡ ತಮ್ಮ ಮಕ್ಕಳನ್ನು ಆಂಗ್ಲ ಪಾಠಶಾಲೆಗೆ ಸೇರಿಸುತ್ತಿರುವ ಹಂತದಲ್ಲಿ ನಾವಿದ್ದೇವೆ. ಕನ್ನಡ ಭಾಷೆ ಸಾಹಿತ್ಯದ ಕುರಿತು ಚಿಂತಿಸುವ ಅವಶ್ಯಕತೆ ನಮ್ಮ ಮುಂದಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಹಾಗೇ ಸಾಹಿತ್ಯದ ದಾರಿಯಲ್ಲಿ ಜೀವನದ ಬಗ್ಗೆ ಹೊಸತನವನ್ನು ಹುಡುಕುವುದು ಮುಖ್ಯ. ಇದಕ್ಕೆ ಮೂಲಾಧಾರವೇ ಸಾಹಿತ್ಯ. ಕೇವಲ ಪ್ರಶಸ್ತಿಗಳ ಆಸೆಗಾಗಿ ಕವಿತೆ, ಸಾಹಿತ್ಯ ಬರೆಯುವುದಲ್ಲ. ಏನನ್ನು ಓದದೇ ಹೊಸದನ್ನು ಬರೆಯುವ ಮೊದಲು ಓದುವುದನ್ನು ಮುಂದುವರಿಸಬೇಕು. ಇಲ್ಲವಾದರೇ ಸಾಧ್ಯವಿಲ್ಲ ಎಂದು ಯುವ ಕವಿಗಳಿಗೆ ಕಾಯ್ಕಿಣಿ ಕಿವಿಮಾತು ಹೇಳಿದರು.
ಇನ್ನು ಕವಯತ್ರಿ ಮಾಲತಿ ಶೆಟ್ಟಿ ಮಾತನಾಡಿ, ದಸರಾ ವೇದಿಕೆಯು ಕವಿಗಳಿಗೆ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿವೆ. ಇದೇ ತರಹ ವಿವಿಧ ವೇದಿಕೆಗಳಲ್ಲಿ ದಸರಾ ಕವಿಗೋಷ್ಠಿಗಳು ನಡೆಯಲಿದೆ. ಕನ್ನಡದ ಹಿರಿಯ ಕವಿಗಳು ಕನ್ನಡ ಸಾಹಿತ್ಯಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ಸಾಹಿತ್ಯವನ್ನು ಸೃಷ್ಟಿಸಬೇಕಾದರೆ ನಿರಂತರ ಅಧ್ಯಯನದ ಅವಶ್ಯಕತೆ ಇದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕವಿಗೋಷ್ಠಿ ಉದ್ಘಾಟನಾ ಸಮಾರಂಭದಲ್ಲಿ ಕವಿಗೋಷ್ಠಿ ಉಪಸಮಿತಿಯ ಉಪ ವಿಶೇಷಾಧಿಕಾರಿ ಡಾ.ಎಂ. ದಾಸೇಗೌಡ, ಕಾರ್ಯಾಧ್ಯಕ್ಷರಾದ ಡಾ.ವಿಜಯಕುಮಾರಿ ಎಸ್. ಕರಿಕಲ್, ಕಾರ್ಯದರ್ಶಿ ಎಂ.ಎಸ್.ಗಿರಿಧರ್, ಶಾಸಕರಾದ ತನ್ವೀರ್ ಸೇಠ್, ಕೆ.ಹರೀಶ್ ಗೌಡ, ವಿಧಾನ ಪರಿಷತ್ತಿನ ಸದಸ್ಯ ಹೆಚ್.ವಿಶ್ವನಾಥ್, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ.ರೂಪ, ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಇದನ್ನೂ ಓದಿ: ಸಂಗೀತ ವಿವಿಯಿಂದ ಹಂಸಲೇಖ ಅವರಿಗೆ ಡಿಲಿಟ್ ಪದವಿ