ಮೈಸೂರು: ಬರಗಾಲ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಸರಳ, ಅದ್ಧೂರಿ ದಸರಾ ಎಂಬ ಹೇಳಿಕೆ ನೀಡಬಾರದು ಹಾಗೂ ಸಾಂಪ್ರದಾಯಿಕ ದಸರಾ ಎಂದು ಹೇಳಿಕೆ ನೀಡಬೇಕಾಗಿ ಜಿಲ್ಲಾ ಹೋಟೆಲ್ ಮಾಲೀಕರ ಸಂಘ ಒತ್ತಾಯಿಸಿದೆ.
ಕಳೆದ ಎರಡು ತಿಂಗಳ ಹಿಂದೆ ನಡೆದ 2023ರ ದಸರಾ ಉನ್ನತ ಮಟ್ಟದ ಸಭೆಯಲ್ಲಿ ರಾಜ್ಯ ಸರ್ಕಾರ ಮತ್ತು ಮೈಸೂರು ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಈ ಬಾರಿ ಅದ್ಧೂರಿ ದಸರಾ ಆಚರಿಸಲಾಗುವುದೆಂದು ಘೋಷಣೆ ಮಾಡಲಾಗಿತ್ತು. ಇದನ್ನು ಹೋಟೆಲ್ ಉದ್ಯಮ ಸೇರಿದಂತೆ ಪ್ರವಾಸೋದ್ಯಮದ ಅಡಿಯಲ್ಲಿರುವವರು ಬಹಳ ಸಂತೋಷದಿಂದ ಸ್ವಾಗತಿಸಿದೆವು. ಆದರೆ ಇತ್ತೀಚೆಗೆ ಉಸ್ತುವಾರಿ ಸಚಿವರು ಬರಗಾಲ ಬಂದ ಹಿನ್ನೆಲೆಯಲ್ಲಿ ಸರಳ ದಸರಾ ಹಬ್ಬವನ್ನು ಆಚರಿಸಲಾಗುವುದೆಂದು ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದ್ದಾರೆ. ಈ ರೀತಿಯ ಹೇಳಿಕೆ ಯಾವುದೇ ಕಾರಣಕ್ಕೂ ಸರ್ಕಾರ, ಉಸ್ತುವಾರಿ ಸಚಿವರು ನೀಡಲೇಬಾರದೆಂದು ಹೋಟೆಲ್ ಮಾಲೀಕರ ಸಂಘವು ಮನವಿ ಮಾಡಿದೆ.
ಸರಳ, ಅದ್ಧೂರಿ ದಸರಾ ಎಂದು ಯಾಕೆ ಹೇಳಬೇಕು. ಸಾಂಪ್ರದಾಯಿಕ ದಸರಾ ಎಂದಿನಂತೆ ನಡೆಯುತ್ತದೆ ಎಂದು ಹೇಳಿದರೆ ಸಾಕಾಗುತ್ತದೆ. ಪ್ರವಾಸಿಗರಿಗೆ ಪ್ರತಿ ವರ್ಷ ದಸರಾಕ್ಕೆಂದು ಆಗಮಿಸುವವರಿಗೆ ಗೊಂದಲವಾಗುತ್ತದೆ. ಅಕ್ಕಪಕ್ಕದ ರಾಜ್ಯಗಳಿಂದ ಬರುವ ಪ್ರವಾಸಿಗರಿಗೆ ಚಾಮುಂಡೇಶ್ವರಿ ದೇವಿಯ ಅಂಬಾರಿಯ ಮೆರವಣಿಗೆಯನ್ನು ನೋಡಿ ಕಣ್ತುಂಬಿಕೊಳ್ಳುವುದೇ ಆಶಯವಾಗಿರುತ್ತದೆ ಎಂದು ಸಲಹೆ ನೀಡಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೊರಗಡೆಯಿಂದ ಕಲಾವಿದರನ್ನು ಕರೆಸುವುದನ್ನು ರದ್ದುಪಡಿಸಿದರೆ ಲಕ್ಷಾಂತರ ಹಣ ಉಳಿತಾಯವಾಗುತ್ತದೆ. ಈ ಕಾರ್ಯಕ್ರಮಗಳಿಗೆ ಸ್ಥಳೀಯ ಕಲಾವಿದರನ್ನು ಆಯ್ಕೆ ಮಾಡಿದರೆ ತುಂಬಾ ಹಣ ಉಳಿತಾಯವಾಗುತ್ತದೆ ಎಂದು ತಿಳಿಸಿದೆ.
ಚಲನಚಿತ್ರೋತ್ಸವ, ಕವಿಗೋಷ್ಠಿ, ಯುವಸಂಭ್ರಮ ಅವುಗಳನ್ನು ಉಚಿತವಾಗಿ ಮಾಡಿಕೊಡಲು ಆಹ್ವಾನಿಸಿದರೆ ಎಲ್ಲವೂ ಉಚಿತವಾಗುತ್ತದೆ. ಜೊತೆಗೆ ಅಲ್ಲಿಯೇ ಹಣ ಶೇಖರಣೆಯಾಗುತ್ತದೆ. ದಸರಾ ಲೈಟಿಂಗ್‌ಗಳನ್ನೂ ಸಹ ಪ್ರಾಯೋಜಕತ್ವದಲ್ಲಿ ಮಾಡಬಹುದಾಗಿದೆ. ದಸರಾ ಆಹಾರ ಮೇಳವನ್ನೂ ಸಹ ಹಣದ ಖರ್ಚಿಲ್ಲದಂತೆ ಮಾಡಬಹುದು. ಯಾವುದೇ ಉಪ ದಸರಾಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರನ್ನು ಸ್ಥಳೀಯವಾಗಿ ಆಯ್ಕೆ ಮಾಡಿದರೆ ತುಂಬಾ ಹಣ ಉಳಿತಾಯವಾಗುತ್ತದೆ ಎಂದು ಹೇಳಿದೆ.
ಮೈಸೂರು ದಸರಾ ಸವಿಯಲು ಬರುವವರಿಗೆ ಅರಮನೆಯಿಂದ ನಡೆಯುವ ಜಂಬೂ ಸವಾರಿಯೇ ಮುಖ್ಯ ಕೇಂದ್ರ ಬಿಂದುವಾಗಿರುತ್ತದೆ. ಗ್ರಾಮೀಣ ದಸರಾ, ಯುವ ದಸರಾ, ರೈತ ದಸರಾ ಇವೆಲ್ಲವನ್ನೂ ಖರ್ಚಿಲ್ಲದಂತೆ ಮಾಡಲು ಕ್ರಮ ಕೈಗೊಳ್ಳಬೇಕಾಗಿ, ಉಸ್ತುವಾರಿ ಸಚಿವರು ಹಾಗೂ ಸರ್ಕಾರವನ್ನು ಮೈಸೂರು ಹೋಟೆಲ್ ಮಾಲೀಕರ ಸಂಘವು ಆಗ್ರಹಿಸುತ್ತದೆ.
ಎಲ್ಲ ದಸರಾ ಉಪಸಮಿತಿ ರದ್ದುಪಡಿಸಿ, ಅಧಿಕಾರಿಗಳೇ ಎಲ್ಲಾ ಮಾಡುತ್ತಾರೆ, ಆಗ ದುಂದುವೆಚ್ಚ ಕಡಿತಗೊಳಿಸಬಹುದು. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತೆರಿಗೆಗಳು ಹೆಚ್ಚಿನ ರೀತಿಯಲ್ಲಿ ಬರುವಂತಾಗುತ್ತದೆ. ಈ ಕಾರಣದಿಂದ ಯುವ ದಸರಾ ಸೇರಿದಂತೆ ಯಾವುದಕ್ಕೂ ಸರ್ಕಾರ ಹಣ ಬಿಡುಗಡೆ ಮಾಡದೇ ಸಾಂಪ್ರದಾಯಿಕ ದಸರಾ ನೆರವೇರಿಸಲು ಹೆಚ್ಚಿನ ಆದ್ಯತೆ ನೀಡಿದಲ್ಲಿ ಬರಗಾಲದಲ್ಲೂ ದಸರಾ ಯಶಸ್ವಿಯಾಗುತ್ತದೆ ಎಂದು ಸಂಘವು ತಿಳಿಸಿದೆ.
ಮಹಿಷ ದಸರಾ ಆಚರಿಸುವ ಸುದ್ದಿ ಮತ್ತೆ ಮತ್ತೆ ಕೇಳಿಬರುತ್ತಿದೆ. ದಯಮಾಡಿ ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಹಾಗೂ ಮುಖ್ಯ ಮಂತ್ರಿಗಳು ಕಡಿವಾಣ ಹಾಕಬೇಕಾಗಿ ಈ ಮೂಲಕ ಸರ್ಕಾರವನ್ನು ಹೋಟೆಲ್ ಮಾಲೀಕರ ಸಂಘವು ಆಗ್ರಹಿಸುತ್ತದೆ ಎಂದು ಸಂಘದ ಜಿಲ್ಲಾಧ್ಯಕ್ಷ ಸಿ ನಾರಾಯಣಗೌಡ ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಇದನ್ನೂಓದಿ:ಮೈಸೂರು: ಗೌರಿ ಗಣೇಶ ಹಬ್ಬದ ಪ್ರಯುಕ್ತ ಗಜಪಡೆಗೆ ಅರಮನೆ ಆವರಣದಲ್ಲಿ ವಿಶೇಷ ಪೂಜೆ