ಚಿಕ್ಕಮಗಳೂರು : ಶನಿವಾರ ರಾಜ್ಯದ ಕೆಲವೆಡೆ ಭಾರಿ ಮಳೆಯಾಗಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲೂ ಮಧ್ಯಾಹ್ನ ವರುಣ ಆರ್ಭಟಿಸಿದ್ದಾನೆ. ಶುಕ್ರವಾರ ಸಂಜೆ ಸಾಧಾರಣ ಮಳೆಯಾಗಿತ್ತು. ಇಂದು ಮಧ್ಯಾಹ್ನ ಸುಮಾರಿಗೆ ಮೂರು ಗಂಟೆಗಳ ಕಾಲ ನಿರಂತರ ಮಳೆಯಾಗಿದೆ. ಇಲ್ಲಿನ ರಸ್ತೆಗಳಲ್ಲಿ ನೀರು ಹರಿದಿದ್ದರಿಂದ ವಾಹನ ಸವಾರರು ಪರದಾಡುವಂತಾಗಿತ್ತು.
ಜಿಲ್ಲೆಯ ವಿವಿದೆಡೆ ಭಾರಿ ಮಳೆ : ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಬಾಳೂರು, ಬಣಕಲ್, ಜಾವಳಿ ಸುತ್ತಾಮುತ್ತ ಭಾರಿ ಮಳೆ ಸುರಿದಿದೆ. ಅಕಾಲಿಕ ಮಳೆಯಿಂದಾಗಿ ಅಡಿಕೆ, ಕಾಫಿ, ಮೆಣಸು ಬೆಳೆಗಾರರು ಸಂಕಷ್ಟಕ್ಕೊಳಗಾಗಿದ್ದಾರೆ.
ರಾಜ್ಯದಲ್ಲಿ ಒಂದೆಡೆ ಬರದಿಂದಾಗಿ ರೈತರು ಬೆಳೆದ ಬೆಳೆಗಳು ಸಂಪೂರ್ಣ ಹಾಳಾಗಿವೆ. ಮತ್ತೊಂದೆಡೆ ಘಟ್ಟ ಪ್ರದೇಶದ ತಪ್ಪಲಿನಲ್ಲಿ ಅಕಾಲಿಕ ಮಳೆಯಿಂದ ಕಾಫಿ ಹಣ್ಣಾಗಿದೆ. ಇನ್ನು ಕೆಲ ಭಾಗದಲ್ಲಿ ಕಾಫಿ ಕೊಯ್ಲಿಗೆ ಬಂದಿದ್ದು, ಒಂದೆರಡು ತಿಂಗಳಲ್ಲಿ ಕಾಫಿ ಹಣ್ಣನ್ನು ಕೊಯ್ಲು ಮಾಡುತ್ತಿದ್ದರು. ಆದರೆ ಮಳೆ ಗಾಳಿಯಿಂದಾಗಿ ಕಾಫಿ ಉದುರುವ ಆತಂಕ ಬೆಳೆಗಾರರಿಗೆ ಎದುರಾಗಿದೆ. ಧಾರಾಕಾರ ಮಳೆಯಿಂದಾಗಿ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಡಿತ ಉಂಟಾಗಿ ಜನರು ಪರದಾಡಿದರು.
ರಾಜ್ಯದಲ್ಲಿ ನೈರುತ್ಯ ಮುಂಗಾರು ದುರ್ಬಲ : ರಾಜ್ಯದ ವಿವಿಧೆಡೆ ನೈರುತ್ಯ ಮುಂಗಾರು ದುರ್ಬಲವಾಗಿದ್ದು, ಕೆಲವೆಡೆ ಮಾತ್ರ ಮಳೆಯಾಗಿತ್ತು. ಕಳೆದೆರಡು ದಿನಗಳ ಹಿಂದೆ ಕರಾವಳಿಯಲ್ಲಿ ವ್ಯಾಪಕವಾಗಿ ಮಳೆಯಾಗಿತ್ತು. ಮತ್ತು ವಿವಿಧೆಡೆ ಸಾಧಾರಣ ಮಳೆಯಾಗಿತ್ತು. ಮುಖ್ಯವಾಗಿ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ 3 ಸೆಂ.ಮೀ ಮಳೆಯಾಗಿದೆ. ಹಾಗೆಯೇ ಧರ್ಮಸ್ಥಳ (ದಕ್ಷಿಣ ಕನ್ನಡ ಜಿಲ್ಲೆ), ಗೇರುಸೊಪ್ಪ (ಉತ್ತರ ಕನ್ನಡ ಜಿಲ್ಲೆ), ಸಕಲೇಶಪುರ (ಹಾಸನ ಜಿಲ್ಲೆ), ಮದ್ದೂರು (ಮಂಡ್ಯ ಜಿಲ್ಲೆ), ಮಡಿಕೇರಿ ಎಡಬ್ಲ್ಯುಎಸ್ ಅಲ್ಲಿ ತಲಾ 2 ಸೆಂ.ಮೀ ಮಳೆಯಾಗಿತ್ತು. ಮಂಗಳೂರು, ಮಾಣಿ, ಪುತ್ತೂರು (ದಕ್ಷಿಣ ಕನ್ನಡ ಜಿಲ್ಲೆ), ಮುರುಗೋಡ (ಬೆಳಗಾವಿ ಜಿಲ್ಲೆ), ಕೊಪ್ಪಳ ಎಡಬ್ಲ್ಯೂಎಸ್, ವಿರಾಜಪೇಟೆ (ಕೊಡಗು ಜಿಲ್ಲೆ), ಲಿಂಗನಮಕ್ಕಿ (ಶಿವಮೊಗ್ಗ ಜಿಲ್ಲೆ), ಕಮ್ಮರಡಿ (ಚಿಕ್ಕಮಗಳೂರು ಜಿಲ್ಲೆ) ತಲಾ 1 ಸೆಂ.ಮೀ ಮಳೆಯಾಗಿತ್ತು.
ಕರಾವಳಿಯ ಬಹುತೇಕ ಕಡೆಗಳಲ್ಲಿ, ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಮೀನುಗಾರರಿಗೆ ಎಚ್ಚರಿಕೆಯ ಸೂಚನೆಗಳನ್ನು ನೀಡಿರಲಿಲ್ಲ.
ಇದನ್ನೂ ಓದಿ : ಉತ್ತರ ಪ್ರದೇಶದಲ್ಲಿ ವರುಣಾರ್ಭಟ: 24 ಗಂಟೆಗಳಲ್ಲಿ 19 ಮಂದಿ ಸಾವು