ಮೈಸೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಯಾರೂ ಸೈಡ್ ಲೈನ್ ಮಾಡಲು ಆಗುವುದಿಲ್ಲವೆಂದು ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಮೈಸೂರಿನ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಆದರೆ ಬಿ.ಎಸ್.ಯಡಿಯೂರಪ್ಪ ಅವರು ತಳಹದಿಯಿಂದ ಪಕ್ಷವನ್ನು ಅಧಿಕಾರಕ್ಕೆ ತಂದವರು ಅವರನ್ನ ಯಾರೂ ಸೈಡ್ ಲೈನ್ ಮಾಡಲು ಆಗುವುದಿಲ್ಲವೆಂದು ತಿಳಿಸಿದ್ದಾರೆ.
ಮೈಸೂರು ಭಾಗದವರಿಗೆ ಸಚಿವ ಸಂಪುಟಲ್ಲಿ ಸ್ಥಾನ ವಂಚನೆ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಯಾವ ಬ್ಯಾಂಕ್ ನಲ್ಲಿ ಹಣ ಡೆಪಾಸಿಟ್ ಮಾಡಿದ್ವೋ ಅಲ್ಲೆ ಡ್ರಾ ಮಾಡ್ಬೇಕು. ಬೇರೆ ಬ್ಯಾಂಕ್ ನಲ್ಲಿ ಹಣ ಇಟ್ಟು ಮತ್ತೊಂದು ಬ್ಯಾಂಕ್ನಲ್ಲಿ ಬಿಡುಗಡೆ ಮಾಡಲು ಸಾಧ್ಯವಿಯಲ್ಲ. ಪರೋಕ್ಷವಾಗಿ ಈ ಭಾಗದ ಜನರು ಬಿಜೆಪಿಗೆ ಹೆಚ್ಚು ಮನ್ನಣೆ ಕೊಟ್ಟಿಲ್ಲ ಅದಕ್ಕೆ ಸಚಿವಸ್ಥಾನ ಸಿಕ್ಕಿಲ್ಲವೆಂದಿದ್ದಾರೆ.
ಈ ಭಾಗದ ಜನರು ಬಿಜೆಪಿಗೆ ಮತ ಹಾಕಿಲ್ಲ ಅಂತಾನ ನಿಮ್ಮ ಮಾತಿನ ಅರ್ಥ ಎಂಬ ಪತ್ರಕರ್ತರ ಪ್ರಶ್ನೆಗೆ ಉಲ್ಟಾ ಹೊಡೆದ ಸಚಿವರು. ನಾನು ಈ ಮಾತನ್ನು ತಮಾಷೆಗೆ ಹೇಳ್ತಿದ್ದೆನೆ. ಇನ್ನೊಂದು ನಾಲ್ಕೈದು ಸ್ಥಾನಗಳನ್ನು ಈ ಭಾಗದ ಜನರು ಗೆಲ್ಲಿಸಿದ್ರೆ ನಾವು ಈ ಮೊದಲೇ ಮಂತ್ರಿಗಳಾಗುತ್ತಿದ್ದೆವು. ಈ ಭಾಗದವರಿಗೂ ಸಹ ಸಚಿವ ಸ್ಥಾನ ಸಿಗುತ್ತಿತ್ತು . ಹಾಗೆಂದ ಮಾತ್ರಕ್ಕೆ ನಾವು ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡ್ತಿವಿ ಅಂತಲ್ಲ ಎಂದಿದ್ದಾರೆ.
ಕೆಆರ್ಎಸ್ ಅಣೆಟ್ಟು ಬಳಿ ಡಿಸ್ನಿಲ್ಯಾಂಡ್ ನಿರ್ಮಾಣ ಪ್ರವಾಸೋದ್ಯಮ ಇಲಾಖೆ ಯೋಜನೆ ಅಲ್ಲ. ಇದು ಬೃಹತ್ ನೀರಾವರಿ ಇಲಾಖೆಯ ಯೋಜನೆ ಆಗಿದೆ. ಡಿಸ್ನಿಲ್ಯಾಂಡ್ಗೆ ಸಂಬಂಧಿಸಿದಂತೆ ಯಾವುದೇ ಪ್ರಪೋಸಲ್ ನಮ್ಮ ಬಳಿ ಇಲ್ಲ. ಈ ಹಿಂದಿನ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಈ ಬಗ್ಗೆ ಪ್ರಸ್ತಾಪ ಮಾಡಿದ್ದರು. ಅದಕ್ಕೆ ನನ್ನ ಸಹಮತ ಇದೆ. ಆದ್ರೆ ಯೋಜನೆ ತುಂಬಾ ತಾಂತ್ರಿಕತೆಯಿಂದ ಮಾಡಬೇಕು ಎಂದು ತಿಳಿಸಿದರು.
ಮಹಿಷ ದಸರಾ ಆಚರಣೆ ವೇದಿಕೆ ತೆರವಿನ ವೇಳೆ ಸಂಸದ ಪ್ರತಾಪ್ ಸಿಂಹ ಭಾಷೆ ಬಳಕೆ ಸರಿಯಲ್ಲ. ಚಾಮುಂಡೇಶ್ವರಿಗೆ ಅಪಮಾನ ಮಾಡಲು ಮಹಿಷ ದಸರಾ ಆಚರಣೆ ಮಾಡ್ತಿದ್ದಾರೆ. ಸಂಸದ ಪ್ರತಾಪ್ ಸಿಂಹ ಸಾರ್ವಜನಿಕ ಜೀವನದಲ್ಲಿ ಇರೋರು, ಭಾಷೆ ಬಳಕೆ ಬಗ್ಗೆ ನಾನು ವೈಯಕ್ತಿಕವಾಗಿ ಒಪ್ಪಲ್ಲ. ಒಂದು ವೇಳೆ ಆ ಸ್ಥಳದಲ್ಲಿ ನಾನು ಇದ್ದರೆ ನನ್ನ ಭಾವನೆ ಸಹ ಹಾಗೇ ಇರುತ್ತಿತ್ತು. ಮಹಿಷಾಸುರನ ಬಗ್ಗೆ ಜನ ಸಾಮಾನ್ಯರಿಗೆ ಗೊತ್ತಾಗಿಲ್ಲ ಎಂದರು.
ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಜಯಂತಿಗಳು, ಉತ್ಸವಗಳ ಆಚರಣೆ ಸ್ವರೂಪ ಬದಲಾವಣೆ ಮಾಡಲು ಚಿಂತನೆ ನಡೆಸಲಾಗಿದೆ. ಸದ್ಯ ಪ್ರತಿಯೊಂದು ಜಾತಿಗೂ ಒಂದು ಜಯಂತಿಗಳು ಇವೆ. ನಾವು ಅವುಗಳನ್ನು ನಿಲ್ಲಿಸುತ್ತೇವೆ ಅಂತ ಹೇಳಿದ್ರೆ ವಿವಾದ ಆಗುತ್ತೆ. ನಾವು ಅದರ ಸ್ವರೂಪಗಳನ್ನು ಬದಲಾಯಿಸಿ ಅರ್ಥ ಪೂರ್ಣವಾಗಿ ಮಾಡ್ತಿವಿ. ರಾಜ್ಯದ ಎಲ್ಲಾ ಕಡೆಯಿಂದ ಜನರ ಅಭಿಪ್ರಾಯ ಸಂಗ್ರಹ ಮಾಡ್ತಿವಿ. ಬಳಿಕ ಅದನ್ನು ಚರ್ಚೆ ಮಾಡುವ ಮೂಲಕ ಹೊಸ ರೂಪದ ಬಗ್ಗೆ ಜನರಿಗೆ ಪರಿಚಯಿಸುತ್ತೇವೆ ಎಂದಿದ್ದಾರೆ.