ಮೈಸೂರು: 'ಕಾಮನ್ ಮ್ಯಾನ್' ಕಾರ್ಟೂನ್ ಮೂಲಕ ದೇಶದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ವ್ಯಂಗ್ಯ ಚಿತ್ರಕಾರ ಆರ್.ಕೆ.ಲಕ್ಷ್ಮಣ್ ಅವರ 'ಸಾಮಾನ್ಯ ಮನುಷ್ಯ' ಇನ್ಮುಂದೆ ಶಿವಮೊಗ್ಗ ಅರಸಾಳು ರೈಲ್ವೆ ನಿಲ್ದಾಣದಲ್ಲಿ ನಿಲ್ಲಲ್ಲಿದ್ದಾನೆ.
ನೈರುತ್ಯ ರೈಲ್ವೆಯ ಸೂಚನೆಯಂತೆ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು , 5 ಅಡಿ ಎತ್ತರದಲ್ಲಿ 'ಕಾಮನ್ ಮ್ಯಾನ್' ಪ್ರತಿಮೆಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಕಳೆದ 15 ದಿನಗಳಿಂದ ಈ ಕಾರ್ಯದಲ್ಲಿ ಮಗ್ನರಾಗಿರುವ ಇವರು ಅಂತಿಮ ರೂಪರೇಷೆ ನೀಡಲು ಸಜ್ಜಾಗಿದ್ದಾರೆ. 'ಮಾಲ್ಗುಡಿ ಡೇಸ್' ನ ಸ್ವಾಮಿ ಅಂಡ್ ಫ್ರೆಂಡ್ಸ್ ಹಾಗೂ ಆರ್.ಕೆ.ಲಕ್ಷ್ಮಣ್ ಅವರ 'ಕಾಮನ್ ಮ್ಯಾನ್' ಪ್ರತಿಮೆ ರೆಡಿ ಮಾಡುತ್ತಿದ್ದಾರೆ.
ಆರ್.ಕೆ.ಲಕ್ಷ್ಮಣ್ ಅವರ 'ಕಾಮನ್ ಮ್ಯಾನ್' ಕಾರ್ಟೂನ್ ಪುಸ್ತಕವನ್ನು ಪ್ರಧಾನಿ ಮೋದಿ ಅವರು ಬಿಡುಗಡೆಗೊಳಿಸಿದ್ದರು. ಅಷ್ಟರ ಮಟ್ಟಿಗೆ ಈ ಕಾರ್ಟೂನ್ ಜನಸಾಮಾನ್ಯರ ಭಾವನೆಗಳನ್ನು ಬೆಸೆದಿದೆ. ಶಿವಮೊಗ್ಗದ ಅಸರಾಳು ರೈಲ್ವೆ ನಿಲ್ದಾಣದಲ್ಲಿ 'ಕಾಮನ್ ಮ್ಯಾನ್' ನಿಂತರೆ ಆರ್.ಕೆ.ಲಕ್ಷ್ಮಣ್ ಅವರ ಹೆಸರು ಜನಸಾಮಾನ್ಯರ ಮನಸ್ಸಿನಲ್ಲಿ ಸದಾ ಉಳಿಯಲಿದೆ.