ಮೈಸೂರು: ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ಗೆ ಅಲ್ಖೈದಾ ಸಂಘಟನೆ ಬೆಂಬಲದ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಇಬ್ರಾಹಿಂ ಪ್ರತಿಕ್ರಿಯಿಸಿ, ಅಲ್ಖೈದಾಗೂ ಕರ್ನಾಟಕಕ್ಕೂ ಯಾವುದೇ ಸಂಬಂಧವಿಲ್ಲ. ಮುಸ್ಕಾನ್ ಎಂಬ ಹುಡುಗಿಗೆ ಆ ಸಂಘಟನೆಯೇ ಗೊತ್ತಿಲ್ಲ. ಇದೆಲ್ಲಾ ಇವರ(ಬಿಜೆಪಿ) ಸೃಷ್ಟಿ ಎಂದರು.
ಅಲ್ ಖೈದಾ, ಪಾಲಾ ಖೈದಾ ಎಂದು ಇವರೇ ಸೃಷ್ಟಿ ಮಾಡುತ್ತಿದ್ದಾರೆ. ಅಲ್ ಖೈದಾ ಇದ್ದರೆ ಅವರನ್ನು ಹುಡುಕಿ ಬಂಧಿಸಿ. ಸುಮ್ಮನೆ ಏನೇನೋ ಮಾತಾಡಬೇಡಿ ಎಂದು ಗರಂ ಆದರು. ಇದೇ ವೇಳೆ, ಬೆಂಗಳೂರಿನಲ್ಲಿ ನಡೆದ ಯುವಕನ ಕೊಲೆ ವಿಚಾರದಲ್ಲಿ ಗೃಹ ಸಚಿವರ ಭಿನ್ನ ಹೇಳಿಕೆ ಬಗ್ಗೆ ಮಾತನಾಡುತ್ತಾ, ಬಿಜೆಪಿಯವರಿಗೆ ತಲೆ ಕೆಟ್ಟಿದೆ. ಮಂಗನಿಗೆ ಹೆಂಡ ಕುಡಿಸಿದರೆ ಹೇಗೆ ನೃತ್ಯ ಮಾಡುತ್ತೋ ಹಾಗೇ ಇವರು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಅಲ್ಖೈದಾ ಉಗ್ರ ಹೇಳಿದ್ದೇನು? ಹಿಜಾಬ್ ಸಂಘರ್ಷದ ವೇಳೆ ಅಲ್ಲಾಹು ಅಕ್ಬರ್ ಎಂದು ಕೂಗಿದ್ದ ವಿದ್ಯಾರ್ಥಿನಿ ಮುಸ್ಕಾನ್‍ಳನ್ನು 'ಭಾರತದ ಶ್ರೇಷ್ಠ ಮಹಿಳೆ' ಎಂದು ಜಗತ್ತಿನ ಮೋಸ್ಟ್ ವಾಂಟೆಡ್ ಉಗ್ರ, ಅಲ್‍ಖೈದಾ ಸಂಘಟನೆಯ ಮುಖ್ಯಸ್ಥ ಅಮನ್-ಅಲ್-ಜವಾಹಿರಿ ಬಣ್ಣಿಸಿದ್ದಾನೆ. ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಆತ, ಮುಸ್ಕಾನಳ ಧೈರ್ಯ, ಶೌರ್ಯ ನಮ್ಮೆಲ್ಲರಿಗೂ ಮಾದರಿ ಎಂದು ಹೊಗಳಿದ್ದಾನೆ.
ಹೆಚ್ಚಿನ ಓದಿಗೆ: ಭಾರತದಲ್ಲಿ ಹಿಜಾಬ್ ವಿವಾದಕ್ಕೆ ಅಲ್‌ಖೈದಾ 'ಉಗ್ರ'ನುಡಿ; ಮಂಡ್ಯ ವಿದ್ಯಾರ್ಥಿನಿಯ ಗುಣಗಾನ
ಈ ಸಂಬಂಧ ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದು, ಅಲ್ ಖೈದಾ ಮುಖ್ಯಸ್ಥ ವಿದ್ಯಾರ್ಥಿನಿ ಮುಸ್ಕಾನ್ ಹೇಳಿಕೆಯನ್ನು ಶ್ಲಾಘಿಸಿದ್ದನ್ನೆಲ್ಲಾ ನೋಡಿದರೆ ಇದರ ಹಿಂದೆ ಕಾಣದ ಕೈಗಳಿವೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದಿದ್ದಾರೆ.