ಮೈಸೂರು: ಚಾಮುಂಡಿ ಬೆಟ್ಟದಲ್ಲಿ ರಸ್ತೆ ಬದಿಯ ಅಂಗಡಿ ಮುಂಗಟ್ಟುಗಳ ವ್ಯಾಪಾರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ರಸ್ತೆ ಬದಿಯ ಅಂಗಡಿ ಮುಂಗಟ್ಟುಗಳನ್ನು ತಹಶಿಲ್ದಾರ್ ನೇತೃತ್ವದಲ್ಲಿ ಇಂದು ಬೆಳಗ್ಗೆ ತೆರವುಗೊಳಿಸುವ ಬಗ್ಗೆ ತಿಳಿದ ವ್ಯಾಪಾರಿಗಳು, ಕೂಡಲೇ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡರ ಗಮನಕ್ಕೆ ತಂದಿದ್ದಾರೆ. ಅವರಿಗೆ ಸ್ಪಂದಿಸಿರುವ ಶಾಸಕ ಜಿ.ಟಿ. ದೇವೇಗೌಡ ಅವರು ತಹಶಿಲ್ದಾರ್ ರಮೇಶ್ ಬಾಬು ಅವರಿಗೆ ಕರೆ ಮಾಡಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿ ಮುಂದಿನ ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಚಾಮುಂಡಿ ಬೆಟ್ಟದಲ್ಲಿರುವ ನಾಯಕರ ಸಮುದಾಯ ಭವನದಲ್ಲಿ, ಮುಖಂಡರು ಹಾಗೂ ವ್ಯಾಪಾರಿಗಳೊಂದಿಗೆ ತಹಶಿಲ್ದಾರ್ ರಮೇಶ್ ಬಾಬು ನಿನ್ನೆಯೇ ಸಭೆ ನಡೆಸಿ, ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.
ಚಾಮುಂಡಿ ಬೆಟ್ಟದಲ್ಲಿ ಫುಟ್ಪಾತ್ ಮೇಲಿನ ಅಂಗಡಿಗಳ ತೆರವಿಗೆ ಸೂಚನೆ: ವ್ಯಾಪಾರಿಗಳಿಂದ ಪ್ರತಿಭಟನೆ
ಈ ವೇಳೆ ಮಾತನಾಡಿದ ತಹಶಿಲ್ದಾರ್, 82ಮಂದಿಗೆ ಮುಜರಾಯಿ ಇಲಾಖೆಯಿಂದ ಹಕ್ಕುಪತ್ರ ಕೊಡಿಸಿ, ಉಳಿದ ಅಂಗಡಿಗಳ ತೆರವು ಮಾಡಲು ನಿರ್ಧರಿಸಲಾಗಿತ್ತು. ಒಟ್ಟು 216ಮಂದಿಗೆ ಪರ್ಯಾಯ ವ್ಯವಸ್ಥೆ ಮಾಡಿ, ಮುಂದಿನ ವಾರ ಚಾಮುಂಡಿ ಬೆಟ್ಟದ ರಸ್ತೆ ಬದಿ ವ್ಯಾಪಾರಿಗಳನ್ನು ತೆರವು ಮಾಡಲಾಗುವುದು ಎಂದಿದ್ದಾರೆ. ಇನ್ನು ಇದಕ್ಕೆ ಉಸ್ತುವಾರಿ ಸಚಿವ ವಿ. ಸೋಮಣ್ಣ ಕೂಡ ಒಪ್ಪಿದ್ದರಿಂದ ಪರ್ಯಾಯ ವ್ಯವಸ್ಥೆ ಮಾಡಿದ್ದಕ್ಕೆ ವ್ಯಾಪಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.