ಮೈಸೂರು: ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದೆಂದು ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನಗರದ ಹಾರ್ಡಿಂಜ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ನಮ್ಮ ಕರ್ನಾಟಕದ ರೈತರು ನೀರಿಲ್ಲದೆ ಸಂಕಷ್ಟದಲ್ಲಿದ್ದಾರೆ. ಬೆಳೆಗಳು ನೀರಿಲ್ಲದೆ ಒಣಗುತ್ತಿದ್ದು, ಬೆಳೆಗಳನ್ನು ಕಾಪಾಡಬೇಕಾಗಿದೆ. ಆದರೆ, ರಾಜ್ಯ ಸರ್ಕಾರ ತಮಿಳುನಾಡಿನ ಒತ್ತಡಕ್ಕೆ ಮಣಿದು ನೀರು ಹರಿಸುತ್ತಿದೆ. ಇದನ್ನು ಕೇಳುವವರು ಯಾರು? ಕರ್ನಾಟಕದ ರೈತರ ಕಣ್ಣೀರನ್ನು ಒರೆಸುವವರು ಯಾರು? ತಮಿಳುನಾಡಿನಲ್ಲಿ ಲೆಕ್ಕವಿಲ್ಲದೆ, ಲಂಗು-ಲಗಾಮಿಲ್ಲದೆ ಬೆಳೆ ಬೆಳೆಯುತ್ತಿದ್ದಾರೆ. ಪ್ರತಿ ಬಾರಿಯೂ ತಮಿಳುನಾಡು ಕರ್ನಾಟಕದ ಮೇಲೆ ಪಿತೂರಿ ಮಾಡುತ್ತದೆ ಎಂದು ಕಿಡಿ ಕಾರಿದರು.
ತಮಿಳುನಾಡಿನ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ನೀರು ಬಿಟ್ಟಿದೆ. ನ್ಯಾಯಾಲಯಕ್ಕೆ ಹೋಗುವ ಮೂಲಕ ಹೆದರಿಸುತ್ತಿದ್ದಾರೆ. ನಿರ್ವಹಣಾ ಸಮಿತಿ ತೀರ್ಮಾನ ಸರಿಯಲ್ಲ. ನಿಜಲಿಂಗಪ್ಪನವರಿಂದ ಬಸವರಾಜ್ ಬೊಮ್ಮಾಯಿಯವರ ತನಕ ಎಲ್ಲಾ ಮುಖ್ಯಮಂತ್ರಿಗಳನ್ನು ನೋಡಿದ್ದೇವೆ. ಈ ಹಿಂದೆ ಬಂಗಾರಪ್ಪನವರು ಸಿಎಂ ಆಗಿದ್ದಾಗ ಕಾವೇರಿ ನೀರಿನ ವಿಚಾರದಲ್ಲಿ ದಿಟ್ಟ ನಿಲುವು ತೆಗೆದುಕೊಂಡಿದ್ದರು. ನಾವೆಲ್ಲರೂ ಬಂಗಾರಪ್ಪನವರಿಗೆ ಬೆಂಬಲ ನೀಡಿದ್ದೆವು. ಆದರೆ ಬಂಗಾರಪ್ಪನವರು ತೋರಿದಂತಹ ದಿಟ್ಟ ನಿಲುವನ್ನು ಈಗಿನ ಮುಖ್ಯಮಂತ್ರಿಗಳು ತೋರುತ್ತಿಲ್ಲ. ಸಿದ್ದರಾಮಯ್ಯನವರು ಒತ್ತಡಕ್ಕೆ ಸಿಲುಕಿದ್ದಾರೆ. ಅವರು ಯಾವ ಒತ್ತಡಕ್ಕೆ ಸಿಲುಕಿದ್ದಾರೋ ಗೊತ್ತಿಲ್ಲ. ಸಿದ್ದರಾಮಯ್ಯ ಹೆದರಬೇಕಾದ ಅವಶ್ಯಕತೆ ಇಲ್ಲ. ಅವರು ಎರಡನೇ ಬಾರಿ ಕಾಟಾಚಾರಕ್ಕೆ ಸಿಎಂ ಆಗಿದ್ದಾರೆ. ಅವಧಿ ಮುಗಿಸಿದರೆ ಸಾಕು ಎನ್ನುವ ಮನಸ್ಥಿತಿಯಲ್ಲಿದ್ದಾರೆ ಎಂದು ವಾಟಳ್ ಹೇಳಿದರು.
ಕಾವೇರಿ ವಿಚಾರದಲ್ಲಿ ಸಿದ್ದರಾಮಯ್ಯ ಅವರ ನಿಲುವು ಸರಿಯಿಲ್ಲ. ಹೇಳದೆ ಕೇಳದೆ ನೀರು ಬಿಟ್ಟಿದ್ದಾರೆ. ನೀರು ಬಿಟ್ಟ ಮೇಲೆ ಯಾಕೆ ಸರ್ವ ಪಕ್ಷ ಸಭೆ ಕರೆಯಬೇಕು. ಸರ್ಕಾರ ಯಾವುದೇ ಕಾರಣಕ್ಕೂ ನೀರು ಬಿಡಬಾರದು. ಮೊದಲು ರಾಜ್ಯದ ಜನರ ಹಿತ ಕಾಯಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಕನ್ನಡಪರ ಹೋರಾಟಗಾರ ಶಿವಶಂಕರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
![ಕಾವೇರಿ ನೀರು ವಿವಾದ: ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಕ್ರೋಶ](https://etvbharatimages.akamaized.net/etvbharat/prod-images/20-08-2023/19313392_thumb.jpg)
ಸಿಎಂ ಸರ್ವಪಕ್ಷ ಸಭೆ ಕರೆಯಲಿ- ಕುರುಬೂರು : ಮತ್ತೊಂದೆಡೆ ಕಾವೇರಿ ನೀರು ಬಿಟ್ಟಿರುವ ವಿಚಾರವಾಗಿ, ಕಬಿನಿ ಕಾವೇರಿ ನದಿ ಮೂಲಕ ತಮಿಳುನಾಡಿಗೆ ಹರಿಸುತ್ತಿರುವ ನೀರು ಕೂಡಲೇ ನಿಲ್ಲಿಸದಿದ್ದರೆ, ಸಚಿವರುಗಳಿಗೆ ಘೇರಾವ್ ಮಾಡಬೇಕಾಗುತ್ತದೆ. ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಕಾವೇರಿ ಭಾಗದ ರೈತರ ಮರಣ ಶಾಸನ ಬರೆಯಲು ಮುಂದಾಗಿದ್ದಾರೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಜಲದರ್ಶಿನಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾವೇರಿ ಅಚ್ಚುಕಟ್ಟು ಭಾಗದ ರೈತರ ಬಗ್ಗೆ ಕಣ್ಣೀರು ಸುರಿಸಿ ತಮಿಳುನಾಡಿಗೆ ಅಮೃತಧಾರೆ ಹರಿಸುತ್ತಿದ್ದಾರೆ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಸರ್ವಪಕ್ಷ ಮುಖಂಡರು ಹಾಗೂ ರೈತ ಮುಖಂಡರ ಸಭೆ ಕರೆದು ಚರ್ಚಿಸಿ ರಾಜ್ಯದ ರೈತರ ಹಿತ ಕಾಪಾಡಲಿ. ಕಬ್ಬು ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸದಿದ್ದರೆ, ರೈತರು ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಕ್ಕರೆ, ಕಾನೂನು ಸಚಿವರು ಒಳಗೊಂಡಂತೆ ರೈತ ಮುಖಂಡರನ್ನು ಆಹ್ವಾನಿಸಿ ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪ ಭರವಸೆ ನೀಡಿದ್ದು, ಅದರಂತೆ 30ರಂದು ಸಕ್ಕರೆ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಕರೆದಿರುವುದಾಗಿ ಕಬ್ಬು ಅಭಿವೃದ್ಧಿ ಆಯುಕ್ತರು ಪತ್ರದಲ್ಲಿ ತಿಳಿಸಿದ್ದಾರೆ. ಅಂದು ಸಮಸ್ಯೆ ಬಗೆಹರಿಯದಿದ್ದರೆ ಕಬ್ಬು ಬೆಳೆಗಾರರ ರೈತರು ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ. ರೈತರು ಕೃಷಿ ಪಂಪ್ಸೆಟ್ಗಳಿಗೆ ಹಗಲು ಹೊತ್ತಿನಲ್ಲಿ ಸಮರ್ಪಕ ವಿದ್ಯುತ್ ನೀಡುವ ತನಕ, ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆ ನಿಗದಿ ಮಾಡುವ ತನಕ ಆಧಾರ್ ಲಿಂಕ್ ಮಾಡಲು ವಿರೋಧ ವ್ಯಕ್ತಪಡಿಸಲಾಗಿದೆ. ಯಾವುದೇ ಕಾರಣಕ್ಕೂ ರೈತರು ಆಧಾರ್ ಜೋಡಣೆಗೆ ವಿರೋಧಿಸಬೇಕು. ಕರ ನಿರಾಕರಣೆ ಚಳುವಳಿ ಮೂಲಕ ಗ್ರಾಮ ಘಟಕಗಳಿಂದ ಈ ಚಳವಳಿ ಆರಂಭಿಸಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರ ವಿಶ್ವ ವ್ಯಾಪಾರ ಒಪ್ಪಂದದಿಂದ ಹಿಂದೆ ಬರದಿದ್ದರೆ, ದೇಶದ ರೈತರ ಸ್ಥಿತಿ ಹದಗೆಡಲಿದೆ. ಆಮದು ತೆರಿಗೆಯನ್ನು ಶೇ.40 ರಷ್ಟು ಇಳಿಕೆ ಮಾಡಿದ ಪರಿಣಾಮ ಈಗಾಗಲೇ ಕೊಬ್ಬರಿ ಬೆಲೆ ಕುಷಿತವಾಗಿದ್ದು, ಕೊಬ್ಬರಿ ಬೆಳೆದ ರೈತ ಬೀದಿಗಿಳಿಯಬೇಕಾಗಿದೆ. ಈ ಬಗ್ಗೆ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೆತರ) ಸಂಘಟನೆ ದೇಶಾದ್ಯಂತ ಸದ್ಯದಲ್ಲಿಯೇ ಹೋರಾಟಕ್ಕೆ ಕರೆ ನೀಡಲು ತೀರ್ಮಾನಿಸಿದೆ ಎಂದು ತಿಳಿಸಿದರು.
ಇದನ್ನೂ ಓದಿ : ಕಾವೇರಿ ನೀರು ಹಂಚಿಕೆ ವಿವಾದ: ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಸಂಪುಟ ಸಭೆ ತೀರ್ಮಾನ